ನವದೆಹಲಿ: ಸರ್ಕಾರ ದೇಶದಲ್ಲಿ ಇಂದಿನಿಂದ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯ ಮೇಲೆ ನಿಷೇಧ ಹೇರಿದೆ. ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮವನ್ನು ಪರಿಗಣಿಸಿ ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಂಡಿದೆ.
ಸದ್ಯ ದೇಶದಲ್ಲಿ ವಾರ್ಷಿಕ ಸುಮಾರು ನಾಲ್ಕು ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಆ ಪೈಕಿ ಮೂರನೇ ಒಂದು ಭಾಗವನ್ನು ಮರುಬಳಕೆ ಮಾಡಲಾಗುವುದಿಲ್ಲ. ನೀರಿನಲ್ಲಿ ಮತ್ತು ಭೂಮಿಯ ಅಡಿಯಲ್ಲಿ ಹುದುಗಿ ಸಿಕ್ಕಿದ ಪ್ಲಾಸ್ಟಿಕ್ ಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದು, ಇದರಿಂದ ವಾಯುಮಾಲಿನ್ಯ ಉಲ್ಬಣಗೊಳ್ಳುತ್ತಿರುವ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿದೆ.
ಭಾರತದ ನಗರಗಳಲ್ಲಿ ಬೀದಿ ಹಸುಗಳು ಪ್ಲಾಸ್ಟಿಕ್ ತಿನ್ನುವುದು ಸಾಮಾನ್ಯ ದೃಶ್ಯವಾಗಿದೆ. ಉತ್ತರಾಖಂಡದ ಉತ್ತರದ ಕಾಡುಗಳಲ್ಲಿ ಆನೆಗಳ ಸೆಗಣಿಯಲ್ಲಿ ಪ್ಲಾಸ್ಟಿಕ್ ಕುರುಹುಗಳು ಕಂಡು ಬಂದಿರುವುದಾಗಿ ಇತ್ತೀಚೆಗೆ ನಡೆಸಿದ ಅಧ್ಯಯನವು ಬಹಿರಂಗಪಡಿಸಿದೆ.
ಪರಿಸರ ಸಂರಕ್ಷಣಾ ಕಾಯ್ದೆ (ಇಪಿಎ) ಅಡಿಯಲ್ಲಿ ವಿವಿಧ 19 ಬಗೆಯ ಏಕಬಳಕೆಯ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಹಂತಹಂತವಾಗಿ ಹೊರಹಾಕಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದನ್ನು ಉಲ್ಲಂಘನೆ ಮಾಡಿದಲ್ಲಿ ಸೆಕ್ಷನ್ 15ರ ಅಡಿಯಲ್ಲಿ 1 ಲಕ್ಷ ರೂ. ನಗದು ದಂಡ ಅಥವಾ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಪರಿಸರ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೆಲವು ಉದ್ದಿಮೆಗಳ ಪ್ರತಿನಿಧಿಗಳು ನಿಷೇಧಕ್ಕೆ ತಯಾರಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಪರಿಸರ ಸಚಿವ ಭೂಪೆಂದರ್ ಯಾದವ್, 2020 ರ ಜುಲೈ 1 ರ ಒಳಗೆ ವಿವಿಧ 19 ಬಗೆಯ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ತೊಡೆದು ಹಾಕುವ ಅಧಿಸೂಚನೆಯನ್ನು 2021 ರ ಆಗಸ್ಟ್’ನಲ್ಲಿ ಹೊರಡಿಸಲಾಗಿದೆ. ಇಂಥ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆದಾರರಿಗೆ ನಾವು ಸಾಕಷ್ಟು ಸಮಯವನ್ನೂ ನೀಡಿದ್ದೇವೆ. ಭವಿಷ್ಯದ ಹಿತದೃಷ್ಟಿಯಿಂದ ಅವರಿಗೆ ಈ ಕುರಿತು ಮನದಟ್ಟು ಮಾಡಿಸಿದ್ದೇವೆ. ಇದಕ್ಕೆ ಬಹುತೇಕರು ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಏಕಬಳಕೆಯ ಪ್ಲಾಸ್ಟಿಕ್ ಬಗ್ಗೆ ಉಪಯುಕ್ತ ಮಾಹಿತಿ
ಏಕಬಳಕೆಯ ಪ್ಲಾಸ್ಟಿಕ್’ಗಳು ಮೂಲಭೂತವಾಗಿ ಒಂದೇ ಬಳಕೆಗಾಗಿ ಪ್ಲಾಸ್ಟಿಕ್’ನಿಂದ ನಿರ್ಮಿತವಾದ ಸಾಮಾಗ್ರಿಗಳಾಗಿವೆ. ಇದರಲ್ಲಿ ಹೆಚ್ಚಿನವು ಪಾಲಿಥಿನ್ ಬ್ಯಾಗ್, ಸ್ಯಾಚೆಟ್’ಗಳು, ಶ್ಯಾಂಪೂ ಬಾಟಲಿಗಳು, ಬಿಸಾಡುವ ಗ್ಲಾಸ್’ಗಳು, ಇಯರ್ ಬಡ್ಸ್ ಕಡ್ಡಿ ಮೊದಲಾದವುಗಳು. ಈ ಪೈಕಿ ಬಳಸಿದ ಕೂಡಲೇ ವಿಲೇವಾರಿ ಮಾಡಲಾಗುತ್ತದೆ. ಇದನ್ನು ಮರು ಬಳಕೆ ಮಾಡುವುದಿಲ್ಲ. ಕಾರಣ ಇವು ಪರಿಸರದ ಮೇಲೆ ಹೆಚ್ಚಾಗಿ ದುಷ್ಪರಿಣಾಮ ಬೀರುತ್ತದೆ.
ನಿಷೇಧಕ್ಕೊಳಗಾದ 19 ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳು
ಇಯರ್ ಬಡ್ಸ್, ಬಲೂನ್’ಗಳಿಗೆ ಅಂಟಿಸುವ ಪ್ಲಾಸ್ಟಿಕ್ ಸ್ಟಿಕ್ಸ್, ಪ್ಲಾಸ್ಟಿಕ್ ಬಾವುಟ, ಕ್ಯಾಂಡಿ ಸ್ಟಿಕ್ಸ್, ಐಸ್’ಕ್ರೀಮ್ ಕಡ್ಡಿಗಳು, ಪಾಲಿಸ್ಟೈರೇನ್ (ಥರ್ಮೊಕೋಲ್), ಪ್ಲಾಸ್ಟಿಕ್ ತಟ್ಟೆ, ಲೋಟಗಳು, ಪ್ಲಾಸ್ಟಿಕ್ ರೂಪದ ಗಾಜುಗಳು, ಫೋರ್ಕ್‌ಗಳು, ಚಮಚಗಳು, ಸ್ಟ್ರಾಗಳು, ಟ್ರೇಗಳು, ಚಾಕುಗಳು, ಸಿಹಿತಿನಿಸುಗಳ ಡಬ್ಬಿಗಳಲ್ಲಿ ಬಳಸುವ ಪ್ಯಾಕೇಜಿಂಗ್ ಫಿಲಂಗಳು, ಆಹ್ವಾನಪತ್ರಿಕೆಗಳು, ಸಿಗರೇಟು ಪ್ಯಾಕೇಟ್‌ಗಳು 100 ಮೈಕ್ರಾನ್’ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಅಥವಾಅ ಪಿವಿಸಿ ಬ್ಯಾನರ್ ಮತ್ತು ಸ್ಟಿಕರ್’ಗಳು ಪ್ರಮುಖವಾಗಿದೆ.