► ಸಿಂಧಗಿಯಲ್ಲಿ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಮುನ್ನಡೆ
ಸಿಂಧಗಿ: ಅಕ್ಡೋಬರ್ 30ರಂದು ನಡೆದಿದ್ದ ಸಿಂಧಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಎರಡೂ ಕ್ಷೇತ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಮಧ್ಯಾಹ್ನದ ವೇಳೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಫಲಿತಾಂಶದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.
ಸಿಂಧಗಿ ವಿಧಾನ ಸಭಾ ಕ್ಷೇತ್ರದ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆಯತ್ತಿರುವ ಮತ ಎಣಿಕೆ ಕಾರ್ಯದ ಪ್ರಾರಂಭದಲ್ಲಿ ಅಂಚೆ ಮತಪತ್ರಗಳ ಎಣಿಕೆ ನಡೆದಿದ್ದು, ಒಟ್ಟು 22 ಸುತ್ತು ಮತಎಣಿಕೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 5255ಮತಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ನ ಅಶೋಕ ಮನಗೂಳಿ, ಮತ್ತು ಜೆಡಿಎಸ್ನ ನಾಜಿಯಾ ಶಕೀಲ್ ಹಿನ್ನಡೆ ಅನುಭವಿಸಿದ್ದಾರೆ.
ಮೂರೂ ಪಕ್ಷಗಳ ಬೆಂಬಲಿಗರು ಮತ ಎಣಿಕೆಯ ಕೇಂದ್ರದ ಬಳಿ ಜಮಾಯಿಸಿದ್ದಾರೆ. ಅ.30ರಂದು ನಡೆದಿದ್ದ ಮತದಾನದಲ್ಲಿ ಒಟ್ಟು 2,34,437 ಮತದಾರರ ಪೈಕಿ 1,62,852 ಮತದಾರರು ಮತ ಚಲಾಯಿಸಿದ್ದರು.
► ಹಾನಗಲ್ ನಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್
ಹಾನಗಲ್ ವಿಧಾನಸಭಾ ಕ್ಷೇತ್ರದ ದೇವಗಿರಿ ಸರ್ಕಾರಿ ಎಂಜನೀಯರಿಂಗ್ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ 4478 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ವೀಕ್ಷಣಾಧಿಕಾರಿ ಡಾ. ಮಾಧುರಿ ಖೋಡೆ ನೇತೃತ್ವದಲ್ಲಿ ಮತ ಎಣಿಕೆಯ ಪ್ರಕ್ರಿಯೆಗೆ ಆರಂಭವಾಗಿದೆ. ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದ್ದು, ಪ್ರತಿಯೊಬ್ಬರ ಕೋವಿಡ್ ನೆಗೆಟಿವ್ ವರದಿ ಪರಿಶೀಲಿಸಿ ಪೊಲೀಸರು ಕೇಂದ್ರದ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಸೇರಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಒಟ್ಟು 2,04,481 ಮತದಾರರ ಪೈಕಿ 1,71,264 ಜನರು ಮತ ಚಲಾಯಿಸಿದ್ದು, ಶೇ.83.76ರಷ್ಟು ಮತದಾನವಾಗಿದೆ.