ಬೆಳ್ಳಿ ಅಂಗಡಿಯಲ್ಲಿ ಕಳವು: ವಿದ್ಯಾರ್ಥಿಗಳು ಸೇರಿ ಮೂವರ ಬಂಧನ

Prasthutha|

ಬೆಂಗಳೂರು: ವ್ಯವಹಾರದಲ್ಲಿ ನಷ್ಟ ಉಂಟಾಗಿ ಮಾಡಿದ ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಬೆಳ್ಳಿ ಅಂಗಡಿಯಲ್ಲಿ ಇಬ್ಬರು ವಿದ್ಯಾರ್ಥಿಗಳ ಜೊತೆ ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಚಾಮರಾಜಪೇಟೆ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.
ಶ್ರೀನಗರದ ರಾಹುಲ್ ಜೈನ್ (31), ಮಿಥುನ್(19) ಹಾಗೂ ರಾಜೇಶ್ (19) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

- Advertisement -


ಬಂಧಿತರಿಂದ 3.38 ಲಕ್ಷ ನಗದು ಸೇರಿ 9 ಲಕ್ಷ ಮೌಲ್ಯದ 8 ಕೆಜಿ ಬೆಳ್ಳಿಯ ಬಿಸ್ಕತ್ ಗಳು ಮತ್ತು ಇತರೆ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ರಾಹುಲ್ ಜೈನ್ ಚಾಮರಾಜಪೇಟೆಯ ಬೃಂದಾವನ ನಗರದ ಉತ್ತಮ್ ಜೈನ್ ಅವರ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಜೊತೆಗೆ ಎರಡು ಬಟ್ಟೆ ಅಂಗಡಿಗಳನ್ನು ನಡೆಸುತ್ತಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾಗಿ ಮಾಡಿದ ಸಾಲ ತೀರಿಸಲು ಸಂಚು ರೂಪಿಸಿ ತನ್ನ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಮಿಥುನ್ ಹಾಗೂ ರಾಜೇಶ್ ಜೊತೆ ಉತ್ತಮ್ ಜೈನ್ ಅವರ ಚಿನ್ನಾಭರಣ ಕಳವು ಮಾಡಲು ಮುಂದಾಗಿದ್ದ. ಅದರಂತೆ ಕಳೆದ ಮೇ 21 ರಂದು ರಾತ್ರಿ 11ರ ವೇಳೆ ಬೆಳ್ಳಿ ಅಂಗಡಿಯ ರೋಲಿಂಗ್ ಷಟರ್ ಗೆ ಹಾಕಿದ್ದ ಬೀಗವನ್ನು ಮುರಿದು ಅಂಗಡಿಯಲ್ಲಿದ್ದ ಬೆಳ್ಳಿಯ ಒಡವೆಗಳು ಮತ್ತು ಬಿಸ್ಕೆಟ್ ಗಳನ್ನು ಹಾಗೂ ನಗದನ್ನು ಕಳವು ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಇ.ಎರ್ರಿಸ್ವಾಮಿ ಮತ್ತವರ ಸಿಬ್ಬಂದಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.


ಪಿಯುಸಿ ಮುಗಿಸಿದ್ದ ಮಿಥುನ್ ಹಾಗೂ ರಾಜೇಶ್ ಏವಿಯೇಷನ್ ಕೋರ್ಸ್ ಮಾಡುತ್ತಿದ್ದು ಪ್ರಮುಖ ಆರೋಪಿ ರಾಹುಲ್ ಜೈನ್ ಬಟ್ಟೆ ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ. ಮೊದಲ ಬಾರಿ ಆರೋಪಿಗಳು ಅಪರಾಧ ಕೃತ್ಯದಲ್ಲಿ ತೊಡಗಿದ್ದರು ಎಂದು ಡಿಸಿಪಿ ಮಾಹಿತಿ ನೀಡಿದರು.

Join Whatsapp