ತೋಟದ ಕೆಲಸದಲ್ಲಿ ತೊಡಗಿರುವವರಿಗೆ ಕೆಲವೊಮ್ಮೆ ಏನಾದರೂ ವಿಶೇಷ ವಸ್ತು ಮಣ್ಣು ಅಗೆಯುವಾಗ ಸಿಗುವುದು ಸಾಮಾನ್ಯ. ಆದರೆ ತಾಯಿಯ ಜೊತೆಗೆ ತೋಟದ ಕೆಲಸದಲ್ಲಿ ತೊಡಗಿದ್ದಾಗ ಹುಡುಗಿಯೊಬ್ಬಳಿಗೆ ಬೆಳ್ಳಿಯ ನಾಣ್ಯವೊಂದು ಸಿಕ್ಕಿತು. ಅದು ಆಕೆಯ ಬಂಧನಕ್ಕೆ ಕಾರಣವಾಗುತ್ತದೆ, ಕಾನೂನು ತೊಂದರೆಗೆ ಸಿಗಬೇಕಾಗುತ್ತದೆ ಎಂದು ಆ ತಾಯಿ ಮಗಳು ಊಹಿಸಿರಲಿಲ್ಲ.
ಕೇಟ್ ಹಾರ್ಡಿಂಗ್ ಮತ್ತು ಆಕೆಯ ತಾಯಿ ಬ್ರಿಟನ್ನಿನಲ್ಲಿ ಒಂದು ಮನೆ ಹೊಂದಿದ್ದಾರೆ. ಬೆಳಿಗ್ಗೆ ಸೂರ್ಯ ಮೂಡಿದ ಮೇಲೆ ಇವರೂ ತಮ್ಮ ತೋಟದಲ್ಲಿ ನಾನಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಕಳೆ ಎಳೆದು ಈಚೆ ಹಾಕಿದಾಗ ಮಗಳಿಗೆ ಅಲ್ಲೇನೋ ಹೊಳೆಯುವುದು ಕಂಡಿತು. ತಾಯಿ ಅದನ್ನು ಪರಿಗಣಿಸಲಿಲ್ಲವಾದರೂ ಚೂಟಿ ಮಗಳು ಬಿಡಲಿಲ್ಲ. ಮಣ್ಣು ಸರಿಸಿ ನೋಡಿದಾಗ ಅಲ್ಲಿತ್ತು ಒಂದು ಬೆಳ್ಳಿಯ ನಾಣ್ಯ.
ಚಾರ್ಲ್ಸ್ IV ಫ್ರಾನ್ಸಿನ ರಾಜ ಗದ್ದುಗೆಗೇರುವ 1322ನೇ ಇಸವಿ ಇದ್ದ ಚಾರಿತ್ರಿಕ ನಾಣ್ಯವದು. 700 ವರುಷಗಳ ಹಿಂದಿನ ನಿಧಿ ಎಂದು ಇದನ್ನು ಪರಿಗಣಿಸಿದ್ದರಿಂದ 23ರ ಕೇಟ್ ಹಾರ್ಡಿಂಗ್ ರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ತನಿಖಾಧಿಕಾರಿಗೆ ಈ ನಾಣ್ಯ ದೊರಕಿದ್ದರ ಬಗ್ಗೆ ವರದಿ ಮಾಡದಿರುವುದು ಆಕೆಯ ತಪ್ಪು ಎಂದು ಪರಿಗಣಿಸಲಾಗಿದೆ. ಒಂದು ನಾಣ್ಯ ಸಿಕ್ಕರೂ ನಿಧಿ ಎಂದೇ ಪರಿಗಣಿಸುವ ಕಾನೂನು ಅಲ್ಲಿ ಜಾರಿಯಲ್ಲಿದೆ.
ಕೋರ್ಟಿನಲ್ಲಿ ವಿಚಾರಣೆಗೆ ಬರುವಾಗ ಕೇಟ್ ತರುಣಿ. ಆ ನಾಣ್ಯ ಸಿಕ್ಕಿದ್ದು ಆಕೆಗೆ 10 ವರುಷವಿದ್ದಾಗ. ತಾಯಿಗೆ ಆ ಬಗ್ಗೆ ಕಾನೂನು ಗೊತ್ತಿರಲಿಲ್ಲ. ಮಗಳು ಸಣ್ಣವಳು. ಅವರು ಕೃಷಿ ಬಿಟ್ಟು ಬೇರೇನೂ ಗೊತ್ತಿದ್ದವರಲ್ಲ. ಆದರೆ ಕಾನೂನು ಕುರುಡು!
ಇದರ ನಡುವೆ ತಾಯಿ ನಿಧನರಾಗಿದ್ದರು. ಕೇಟ್ ಆ ನಾಣ್ಯವನ್ನು ಮೆಮೆಂಟೋ ತರ ಇಟ್ಟಿದ್ದಳು. ಕಳೆದ ವರುಷ ಸುಮ್ಮನಿರಲಾಗದೆ ಆ ನಾಣ್ಯದ ಬಗ್ಗೆ ವಸ್ತು ಸಂಗ್ರಹಾಲಯದ ತಜ್ಞರಿಗೆ ವಿಚಾರಿಸಿದಾಗ ಅವರು ಅದರ ಮಹತ್ವ ಹೇಳಿದರೇ ಹೊರತು, ಅದರ ಬಗ್ಗೆ ತನಿಖಾಧಿಕಾರಿಗೆ ತಿಳಿಸಬೇಕು ಎಂದು ಕೂಡಲೆ ಹೇಳಲಿಲ್ಲ. ಆದರೆ ಸುದ್ದಿ ಹರಡಿ ನಿಧಿ ಮುಚ್ಚಿಟ್ಟ ಆರೋಪದ ಮೇಲೆ ಕೇಟ್ ಹಾರ್ಡಿಂಗ್ ಬಂಧನ ಆಯಿತು.
ಪೈಡ್ ಫೋರ್ಟ್ಸ್ ಎನ್ನುವ ಇಂಥ ನಾಣ್ಯಗಳನ್ನು ಚಲಾವಣೆಯ ನಾಣ್ಯವಾಗಿ ಬಳಕೆ ಮಾಡುವುದಿಲ್ಲ. ಅದು ಕಾದಿಡುವ ನೆನಪಿನ ನಾಣ್ಯ ಇಲ್ಲವೇ ಬಿಲ್ಲೆ. ಆದರೆ 700 ವರುಷ ಹಳೆಯದಾದ್ದರಿಂದ ಅದು ಸರಕಾರದ ಸ್ವತ್ತು ಹಾಗೂ ನಿಧಿ ಎನಿಸಿಕೊಂಡಿದೆ. ಇಂಥ ನಾಣ್ಯಗಳು ಸಾಮಾನ್ಯವಾಗಿ ಬಳಕೆಯ ನಾಣ್ಯಗಳಿಗಿಂತ ಸ್ವಲ್ಪ ದಪ್ಪ ಇರುತ್ತವೆ. ಈ ನಾಣ್ಯವು 1.4 ಗ್ರಾಂ ಇತ್ತು.
ಇಂಥ ನಾಣ್ಯಗಳು ಇಂಗ್ಲೆಂಡಿನಲ್ಲಿ ಮೂವರಿಗೆ ಮಾತ್ರ ದೊರೆತಿವೆ. 2007ರಲ್ಲಿ ಸಿಕ್ಕಿದ ಒಂದನ್ನು 1,800 ಪೌಂಡು ನೀಡಿ ಮ್ಯೂಝಿಯಮ್ ಗೆ ತರಲಾಗಿದೆ. 1996ರ ಟ್ರೆಶ್ಶರ್ ಕಾಯ್ದೆಯಂತೆ 300 ವರುಷಕ್ಕಿಂತ ಹಳೆಯ ನಾಣ್ಯಗಳನ್ನು ನಾಣ್ಯಗಳೆಂದು ಪರಿಗಣಿಸದೆ ಅಮೂಲ್ಯ ಲೋಹ, ನಿಧಿ ಎಂದು ಪರಿಗಣಿಸಲಾಗುತ್ತದೆ.
ಇಂಥ ವಸ್ತು ದೊರೆತ 14 ದಿನಗಳ ಒಳಗೆ ದೊರೆತವರು ಅದನ್ನು ಸಮೀಪದ ತನಿಖಾಧಿಕಾರಿಗೆ ತಿಳಿಸಬೇಕು. ಇಲ್ಲದಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಕೊನೆಗೆ ಕಳೆದ ಫೆಬ್ರವರಿಯಲ್ಲಿ ಲುಡ್ಲೊ ಮ್ಯೂಝಿಯಮ್ಮಿನವರು ಆಕೆಗೆ ನೋಟೀಸು ನೀಡಿ ಕೂಡಲೆ ತನಿಖಾಧಿಕಾರಿಯಲ್ಲಿ ಹಾಜರಾಗಿ ತಪ್ಪೊಪ್ಪಿಕೊಳ್ಳುವಂತೆ ಪತ್ರ ಬರೆದರು.
ಕೊನೆಗೆ ಸೌತ್ ಶ್ರೋಪ್ ಶೈರ್ ನ ತನಿಖಾಧಿಕಾರಿ ಅಂತೋಣಿ ಸಿಬ್ಸಿಗೆ ಲುಡ್ಲೊ ಮ್ಯೂಸಿಯಮ್ಮಿನವರು ಮಾಹಿತಿ ನೀಡಿದರು. ಅವರು ಪೊಲೀಸರಿಗೆ ತಿಳಿಸಿದರು. ಬ್ರೆಂಡನ್ ರೀಡಿ ಅವರು ಕೇಟ್ ಪರ ವಾದಿಸುತ್ತ ಮೊದಲು ಆಕೆಗೆ ಅದರ ಕಾನೂನಿನ ಅರಿವು ಇರಲಿಲ್ಲ. ತಿಳಿವು ಬಂದಾಗ ಅದು ಆಕೆಗೆ ಭಾವುಕ ವಿಷಯವಾಗಿತ್ತು. ಏಕೆಂದರೆ ಆಕೆಗೆ ಅದು ಬಾಲಕಿಯಾಗಿರುವಾಗ ಮಡಿದ ತಾಯಿಯ ಜೊತೆ ಕೆಲಸ ಮಾಡುವಾಗ ದೊರೆತಿತ್ತು ಎಂದು ವಾದಿಸಿದರು.
ಲುಡ್ಲೊ ನೆರೆಯ ಹಳ್ಳಿಯಲ್ಲಿ ಕೇಟ್ ಈಗ ತನ್ನ ಗೆಳೆಯನೊಂದಿಗೆ ವಾಸಿಸುತ್ತಿದ್ದಾಳೆ. ಆಕೆಗೆ ಸೆರೆಮನೆ ವಾಸ ಮತ್ತು 300 ಪೌಂಡ್ ದಂಡ ವಿಧಿಸಲಾಗಿದೆ. ಮೂರು ತಿಂಗಳ ಜೈಲು ಶಿಕ್ಷೆಯ ಬಳಿಕ ಫೆಬ್ರವರಿ 3ನೇ ತಾರೀಕಿನಂದು ಆಕೆಯನ್ನು ಶರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 25 ಪೌಂಡುಗಳ ಕಂತಿನಲ್ಲಿ ಕೂಡಲೆ ದಂಡ ಕಟ್ಟಲು ಸೂಚಿಸಲಾಗಿದೆ.