ನವದೆಹಲಿ : ನಿನ್ನೆ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಕೆರಳಿಸಿ, ಕೆಂಪುಕೋಟೆಗೆ ಮುತ್ತಿಗೆ ಹಾಕಿ, ಅಲ್ಲಿ ಸಿಖ್ ಧರ್ಮೀಯರ ‘ನಿಶಾನ್ ಸಾಹಿಬ್’ ಧ್ವಜವನ್ನು ಹಾರಿಸಿದ್ದು ಪಂಜಾಬಿ ಗಾಯಕ, ನಟ ದೀಪ್ ಸಿದು ಎಂದು ರೈತ ಸಂಘಟನೆಗಳು ಆರೋಪಿಸಿವೆ. ಕೆಂಪುಕೋಟೆಯಲ್ಲಿ ಯುವಕರನ್ನು ಕೆರಳಿಸಿ ಆರೋಪ ಹೊತ್ತಿರುವ ದೀಪ್ ಸಿದು ಬಿಜೆಪಿ ಸಂಸದ, ನಟ ಸನ್ನಿ ಡಿಯೋಲ್ ರ ಚುನಾವಣಾ ಪ್ರಚಾರದ ಮ್ಯಾನೇಜರ್ ಆಗಿದ್ದ ಮತ್ತು ಬಿಜೆಪಿಯ ಹಿರಿಯ ನಾಯಕರ ಜೊತೆ ನಂಟು ಹೊಂದಿದ್ದ ಎನ್ನಲಾಗುತ್ತಿದೆ.
ದೀಪ್ ಸಿದು ಯುವಕರನ್ನು ಪ್ರಚೋದನೆಗೊಳಿಸಿ ಪ್ರತಿಭಟನಕಾರರ ಹಾದಿ ತಪ್ಪಿಸಿದ್ದರೆನ್ನಲಾಗಿದೆ. ನಮ್ಮ ಪ್ರತಿಭಟನೆಯನ್ನು ಹಾಳು ಮಾಡಿದ್ದೇ ಅವರು. ಅವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಯಾರ ಪರವಾಗಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ಜೋಗಿಂದರ್ ಸಿಂಗ್ ಉಗ್ರಾಹಣ್ ಹೇಳಿದ್ದಾರೆ.
ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ನಟ ಸಿದು ಖಲ್ಸಾ ಧ್ವಜ ಹಿಡಿದು, ಮಜ್ದೂರ್ ಏಕತಾ ಪರ ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು. ಖಲ್ಸಾ ಧ್ವಜವನ್ನು ಮೊದಲು ಕೆಂಪುಕೋಟೆಯಲ್ಲಿ ಮೊದಲು ನೆಟ್ಟಿದ್ದು ಕೂಡ ಈತನೇ.
ಸಿದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಸಂಸದ, ನಟ ಸನ್ನಿ ಡಿಯೋಲ್ ಅವರೊಂದಿಗಿರುವ ಫೋಟೊ ಸೋಶಿಯಲ್ ಮೀಡಿಯಾಗಳಲ್ಲಿ ನಿನ್ನೆಯಿಂದಲೇ ವೈರಲ್ ಆಗಿದೆ.
ಸಿದು ರೈತರ ಪ್ರತಿಭಟನೆಯಲ್ಲಿ ಕಳೆದ ತಿಂಗಳೇ ಸೇರಿಕೊಂಡಿದ್ದ. ಆದರೆ, ಆತನ ವರ್ತನೆಯಿಂದ ಸಂಶಯಗೊಂಡು ರೈತ ಮುಖಂಡರು ಆತನನ್ನು ಪ್ರತಿಭಟನೆಯಿಂದ ದೂರವಿರಿಸಿದ್ದರು ಎನ್ನಲಾಗುತ್ತಿದೆ.
ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿರುವುದನ್ನು ಸಮರ್ಥಿಸಿಕೊಂಡು, ಸಿದು ಫೇಸ್ ಬುಕ್ ಪೋಸ್ಟ್ ಮಾಡಿದ್ದಾನೆ. “ನಾವು ಮಹಾನ್ ಸಾಹಿಬ್ ಧ್ವಜವನ್ನು ಕೆಂಪುಕೋಟೆ ಮೇಲೆ ಹಾರಿಸಿದ್ದೇವೆ. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ನಮ್ಮ ಧ್ವಜವನ್ನು ಹಾರಿಸುವ ಪ್ರಜಾಪ್ರಭುತ್ವದ ಹಕ್ಕು ನಮಗಿದೆ. ಇಂತಹ ಪ್ರತಿಭಟನೆ ವೇಳೆ ಜನರ ಸಿಟ್ಟು ಆಕ್ರೋಶ ಹೊರಬರುತ್ತದೆ. ಇಲ್ಲಿ ನೀವು ಒಬ್ಬ ವ್ಯಕ್ತಿಯ ಮೇಲೆ ಆರೋಪ ಮಾಡಲು ಸಾಧ್ಯವಾಗುವುದಿಲ್ಲ. ಸಿಖ್ ಧ್ವಜವನ್ನು ಹಾರಿಸಿದಾಗ ಕೆಂಪುಕೋಟೆಯಲ್ಲಿನ ರಾಷ್ಟ್ರಧ್ವಜವನ್ನು ತೆಗೆದಿರಲಿಲ್ಲ” ಎಂದು ಸಿದು ಸಮರ್ಥನೆ ನೀಡಿದ್ದಾನೆ.