ಬೆಂಗಳೂರು: ರಾಜ್ಯದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ರಾಜ್ಯವನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಬೆಂಗಳೂರು ನಗರದಿಂದ ಹೊರ ಭಾಗಗಳಿಗೆ ಕೈಗಾರಿಕೆ, ಸಂಸ್ಥೆಗಳನ್ನು ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಮಣರೆಡ್ಡಿ ಹೇಳಿದ್ದಾರೆ.
ನಗರದ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಸುಸ್ಥಿರ ನಗರಗಳ ವೇದಿಕೆಯಿಂದ ಭವಿಷ್ಯದ ನಗರಗಳು ಕುರಿತು ಹೈಬ್ರಿಡ್ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ರಾಜ್ಯದ ಶೇ. 90ರಷ್ಟು ಕೈಗಾರಿಕೆಗಳು, ಸಂಶೋಧನಾ ಕೇಂದ್ರಗಳು, ಶಿಕ್ಷಣ, ನಾವಿನ್ಯತೆಯ ಸಂಶೋಧನೆ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಕಂಪೆನಿಗಳಿವೆ. ಹೀಗಾಗಿ ರಾಜ್ಯದ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ನೀತಿ ನಿರೂಪಣೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಮುಂದೆ ಬೆಂಗಳೂರು ಸರ್ಕಾರದ ಗುರಿಯಲ್ಲ. ಇತರೆ ಬಾಗಗಳಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಪರಿಹಾರ ಮತ್ತು ಉತ್ತೇಜನಾಕಾರಿ ಕ್ರಮಗಳನ್ನು ಕಲ್ಪಿಸಲು ರಾಜ್ಯವನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಬೆಂಗಳೂರು ವಲಯ 3 ರಲ್ಲಿದೆ ಎಂದರು.
ಹುಬ್ಬಳ್ಳಿ, ಧಾರವಾಡ, ಮೈಸೂರು, ಬೆಳಗಾವಿ, ಕಲಬುರಗಿ ಮತ್ತಿತರ ಜಿಲ್ಲೆಗಳತ್ತ ಸರ್ಕಾರ ಆಸಕ್ತವಾಗಿದೆ. ಹಿಂದುಳಿದ ಚಾಮರಾಜನಗರ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ಮೊದಲ ವಲಯದಲ್ಲಿ ಬರಲಿದ್ದು, ಈ ಭಾಗಕ್ಕೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಸ್ಥಿರ ಅಭಿವೃದ್ದಿ ಸರ್ಕಾರದ ಗುರಿಯಾಗಿದ್ದು, ಸುಸ್ಥಿರತೆ ಎಂದರೆ ಸಂಪನ್ಮೂಲಗಳನ್ನು ಬಳಸಿಕೊಂಡು ನಾಶಪಡಿಸುವುದಲ್ಲ, ಬದಲಿಗೆ ಇವುಗಳನ್ನು ಭವಿಷ್ಯದ ಪೀಳಿಗೆಗೂ ದೊರೆಯುವಂತೆ ಉಳಿಸಿ ಬೆಳೆಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬೆಂಗಳೂರು ನಗರದ ಸಮಸ್ಯೆಗಳನ್ನು ಬಗೆಹರಿಸಲು 20 ದೇಶಗಳ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಸರ್ಕಾರದಿಂದ ಸರ್ಕಾರದ ನಡುವೆ ವ್ಯಾಪಕ ಸಮಾಲೋಚನಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮಾತನಾಡಿ, ನಮ್ಮ ಮೆಟ್ರೋ ಅತ್ಯಂತ ವೇಗ ಮತ್ತು ವಿಸ್ತಾರವಾಗಿ ಬೆಳೆಯುತ್ತಿದ್ದು, “ ನಮ್ಮ ಮೆಟ್ರೋ “ ಮುಂದಿನ 2024 ರ ವೇಳೆಗೆ ಜಗತ್ತಿನ ಪ್ರಮುಖ ಹತ್ತು ನಗರಗಳ ಸಾಲಿಗೆ ಸೇರ್ಪಡೆಯಾಗಲಿದೆ. ದೆಹಲಿ ಮೆಟ್ರೋ ಇದೀಗ ಇಂತಹ ಹೆಗ್ಗಳಿಗೆ ಪಾತ್ರವಾಗಿದ್ದು, ನಮ್ಮ ಮೆಟ್ರೋ ಹೊಸ ಸಾಧನೆಗೆ ಮುನ್ನುಡಿಯಾಗಲಿದೆ ಎಂದರು.
ಸ್ಮಾರ್ಟ್ ನಗರಗಳಲ್ಲಿ ಜನರ ಜೀವನ ವಿಧಾನ ಬದಲಾಗುತ್ತಿದ್ದು, ಇವು ಸುಗಮ ಬದುಕಿಗೆ ರಹದಾರಿಯಾಗಿದೆ. ದೆಹಲಿ ನಂತರ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳನ್ನು ನಿಯಂತ್ರಿಸಲು ಬೆಂಗಳೂರಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದ ಜನಗೆ ದ್ವಿಚಕ್ರ ವಾಹನಗಳ ಮೂಲಕ ಜತೆಗೆ ಸಮೂಹ ಸಾರಿಗೆ ಸ್ಥಳಗಳಿಗೆ ಬರುತ್ತಿರುವುದು ಪರಿವರ್ತನೆಯ ಮೊದಲ ಹೆಜ್ಜೆಯಾಗಿದೆ. ಇಲ್ಲಿ ಪ್ರತಿವರ್ಷ 5,500 ಅಪಘಾತಗಳು ಸಂಭವಿಸುತ್ತಿದ್ದು, 750 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದರು.
ಬೆಂಗಳೂರು ಸುಸ್ಥಿರ ನಗರವಾಗಿ ರೂಪುಗೊಳ್ಳಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಂಚಾರಿ ದಟ್ಟಣೆ ನಿವಾರಣೆಗೆ ಸಮೂಹ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. ಮೆಟ್ರೋ ಈ ಎಲ್ಲಾ ಸಮಸ್ಯಗಳಿಗೆ ಪರಿಹಾರವಾಗಿದೆ. ಮೆಟ್ರೋ ಕೆವಲ ಸಮೂಹ ಸಾರಿಗೆ ವ್ಯವಸ್ಥೆಯಲ್ಲ. ಬದಲಿಗೆ ಇದು ಜೀವನ ಕ್ರಮವಾಗಿದೆ. ದೇಶದ 250 ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇದ್ದು, ಬೆಂಗಳೂರು ಮೆಟ್ರೋ ಎಲ್ಲಾ ನಗರಗಳನ್ನು ಹಿಂದಿಕ್ಕಲಿದೆ. ಕಾಮಗಾರಿಗಳನ್ನು ಕೈಗೊಳ್ಳಲು ಬಿ.ಎಂ.ಆರ್.ಸಿ.ಎಲ್ ಗೆ ಹಣದ ಕೊರತೆ ಎದುರಾಗಿಲ್ಲ. ಜತೆಗೆ ಪರಿಸರ ಸ್ನೇಹಿ ಕಾಮಗಾರಿಗಳಿಗೆ ಆದ್ಯತೆ ನೀಡುವ ಜತೆಗೆ ಮರಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಒಂದೇ ಒಂದು ಮರವನ್ನು ಅನಗತ್ಯವಾಗಿ ಕಡಿಯುತ್ತಿಲ್ಲ. ಒಂದು ಮರ ಕಡಿದರೆ ಹತ್ತು ಗಿಡಗಳನ್ನು ನೆಡುತ್ತಿದ್ದೆವೆ. ಹೈಕೋರ್ಟ್ ಕಣ್ಗಾವಲಿನಲ್ಲಿ ಈ ಎಲ್ಲಾ ಪ್ರಕ್ರಿಯೆ ನಡೆಸುತ್ತಿದ್ದೇವೆ ಎಂದರು.
ಸಮಾವೇಶದಲ್ಲಿ ನಾರ್ಥ್ ವೆಸ್ಟ್ ಫಾಲಿಯಾದ ಆರ್ಥಿಕ ವ್ಯವಹಾರಗಳ ನಾವೀನ್ಯತೆ ಮುಖ್ಯಸ್ಥ ಪ್ರೊ.ಡಾ.ಆಂಡ್ರಿಯಾಸ್ ಪಿಂಕ್ವಾರ್ಟ್, ಜರ್ಮನ್ ಕಾನ್ಸುಲೇಟ್ ಜನರಲ್ ನ ಉಪ ಸಲಹೆಗಾರ ಫೆಡ್ರಿಕ್ ಬಿರ್ಗೆಲೆನ್, ಸಮಾವೇಶದ ನಿರ್ದೇಶಕ ಜೋಸ್ ಜೋಕಬ್, ಎನ್ ಆರ್ ಡಬ್ಲ್ಯೂ ಗ್ಲೋಬಲ್ ಬಿಸಿನೆಸ್ ನ ಅಂಬಿಕಾ ಬನೋತ್ರ ಮತ್ತಿತರರು ಉಪಸ್ಥಿತರಿದ್ದರು.