ತಿರುವನಂತಪುರಂ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರು ಸಹಿ ಸಂಗ್ರಹಿಸಿ ಹೈಕಮಾಂಡ್ ಗೆ ಕಳುಹಿಸಿದ್ದಾರೆ.
ಕೇರಳ ಬಿಜೆಪಿ ನಾಯಕರಾದ ಪಿಕೆ ಕೃಷ್ಣದಾಸ್ ಮತ್ತು ಶೋಭಾ ಸುರೇಂದ್ರನ್ ನೇತೃತ್ವದ ಬಣ ಕೆ.ಸುರೇಂದ್ರನ್ ಅವರ ನೇತೃತ್ವದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಈ ಸಹಿ ಸಂಗ್ರಹ ಅಭಿಯಾನ ನಡೆಸಿದೆ ಎಂದು ಹೇಳಲಾಗಿದೆ.
ಕೇರಳ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ವಿ ಮುರಳೀಧರನ್-ಕೆ.ಸುರೇಂದ್ರನ್ ಬಣವು ಆನ್‌ಲೈನ್ ಸಭೆಗಳನ್ನು ಆಯೋಜಿಸುವ ಮೂಲಕ ಪಕ್ಷವನ್ನು ಸಕ್ರಿಯಗೊಳಿಸಲು ಪ್ರಯತ್ನಿಸುತ್ತಿದೆ. ಈ ನಡುವೆ ಇನ್ನೊಂದು ಬಣ ನಾಯಕತ್ವದ ಬದಲಾವಣೆಗೆ ಒತ್ತಾಯಿಸುತ್ತಿದೆ. ಈ ಬಣವು ಕೆ.ಸುರೇಂದ್ರನ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿ ಪಕ್ಷದೊಳಗೆ ಸಹಿ ಸಂಗ್ರಹಿಸುತ್ತಿದೆ.
ರಾಜೀನಾಮೆ ನೀಡಲು ಕೆ.ಸುರೇಂದ್ರನ್ ಸಿದ್ಧರಿಲ್ಲದಿದ್ದರೆ ಹೈಕಮಾಂಡ್ ರಾಜ್ಯ ಬಿಜೆಪಿಯ ನಾಯಕತ್ವವನ್ನು ಮರು ಸಂಘಟಿಸಬೇಕು ಎಂದು ಕೃಷ್ಣದಾಸ್-ಶೋಭಾ ಸುರೇಂದ್ರನ್ ಬಣವು ಒತ್ತಾಯಿಸಿದೆ.