ನವದೆಹಲಿ : ಹಥ್ರಾಸ್ ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣದ ವರದಿ ಮಾಡಲು ಸಂತ್ರಸ್ತೆಯ ಮನೆಗೆ ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ 5 ದಿನಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಸಿದ್ದೀಕ್ ಕಪ್ಪನ್ ಗೆ ಜಾಮೀನು ಮಂಜೂರು ಮಾಡಲಾಗಿದೆ.
ಜಾಮೀನು ಮಂಜೂರಾದ ಅವಧಿಯಲ್ಲಿ ಸಿದ್ದೀಕ್ ಕಪ್ಪನ್ ಅವರಿಗೆ ಮಾಧ್ಯಮಗಳಿಗೆ ಹೇಳಿಕೆ ನೀಡದಿರುವಂತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕದಂತೆ ಷರತ್ತು ವಿಧಿಸಲಾಗಿದೆ. ಸಂಬಂಧಿಕರು, ವೈದ್ಯರು ಮತ್ತು ತಾಯಿಯ ಆರೋಗ್ಯಕ್ಕೆ ಸಂಬಂಧಿಸಿದವರನ್ನು ಮಾತ್ರ ಭೇಟಿಯಾಗಬಹುದು ಎಂದೂ ಷರತ್ತು ವಿಧಿಸಲಾಗಿದೆ.
ಸಿದ್ದೀಕ್ ಕಪ್ಪನ್ ಅವರಿಗೆ ಪೊಲೀಸ್ ಬೆಂಗಾವಲು ನೀಡಬೇಕು. ಅವರ ಜೊತೆ ಪ್ರಯಾಣಿಸುವುದು ಉತ್ತರ ಪ್ರದೇಶ ಪೊಲೀಸರ ಜವಾಬ್ದಾರಿಯಾಗಿದೆ.
ಇದಕ್ಕೂ ಮೊದಲು ವೀಡಿಯೊ ಕರೆ ಮೂಲಕ ತಾಯಿಯೊಂದಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಆದರೆ, ವೀಡಿಯೊ ಕಾಲ್ ವೇಳೆ ತಾಯಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ.
ಹಥ್ರಾಸ್ ನಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದ ವೇಳೆ ವರದಿಗೆ ತೆರಳಿದ್ದ ಸಿದ್ದೀಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ಕಠಿಣ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ.