ಜಾತಿ ಜನಗಣತಿ ವರದಿ ಕೋಲ್ಡ್ ಸ್ಟೋರೇಜ್ ಗೆ ಕಳುಹಿಸಿದ ಸಿದ್ರಾಮಣ್ಣ: ನಳಿನ್ ಕುಮಾರ್ ಕಟೀಲ್ ವಾಗ್ದಾಳಿ

Prasthutha|

ಬೆಂಗಳೂರು: ಜಾತಿ ಜನಗಣತಿ ವರದಿಗೆ ಸಹಿ ಇಲ್ಲದೆ ಅನಧಿಕೃತವಾಗುವಂತೆ ಮಾಡಿ ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸಿದವರು ಸಿದ್ರಾಮಣ್ಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಮಲ್ಲೇಶ್ವರದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

- Advertisement -

ವಿಧಾನಸಭೆಯಲ್ಲಿ 150 ಪ್ಲಸ್ ಸೀಟುಗಳಿಗೆ ನಾವು ಇಂದಿನಿಂದಲೇ ತಯಾರಿ ಮಾಡಬೇಕು. ಸಿದ್ರಾಮಣ್ಣ ಇದ್ದಾಗ ಜಾತಿ ಜನಗಣತಿಗಾಗಿ ಕಾಂತರಾಜು ಆಯೋಗ ರಚಿಸಲಾಯಿತು. ಅಲ್ಲದೆ ವರದಿ ಪಡೆದಿದ್ದು, ಆ ವರದಿಗೆ ಕಾರ್ಯದರ್ಶಿಗಳ ಸಹಿಯೇ ಇಲ್ಲವೆಂದು ಹಿಂದುಳಿದ ವರ್ಗಗಳ ಆಯೋಗದ ಈಗಿನ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ ಎಂದು ವಿವರ ನೀಡಿದರು.
ಇವತ್ತು ಕಾಂಗ್ರೆಸ್ ಪಕ್ಷದವರು ಹಿಂದುಳಿದ ವರ್ಗದವರ ಬಗ್ಗೆ ಕಣ್ಣೀರು ಹಾಕುತ್ತಾರೆ. ಅಹಿಂದ ಚಳವಳಿಯನ್ನು ಪ್ರಾರಂಭಿಸಿದವರು ಸಿದ್ರಾಮಣ್ಣ. ಮುಖ್ಯಮಂತ್ರಿ ಆದಮೇಲೆ ಆ ಎಲ್ಲ ಸಮುದಾಯಗಳನ್ನು ಹಿಂದೆ ಇಟ್ಟರು. ಅಲ್ಲದೆ ಹಿಂದುಳಿದ ವರ್ಗಗಳ ಯಾವುದೇ ಸಮುದಾಯಕ್ಕೂ ಅವರು ನ್ಯಾಯ ಕೊಡಲಿಲ್ಲ ಎಂದು ಟೀಕಿಸಿದರು.


ಮೊದಲಿಗೆ ದೇವೇಗೌಡರನ್ನು ಗುರುಗಳು ಎಂದು ಹೇಳಿ ಬಳಿಕ ಅವರನ್ನು ತುಳಿದರು. ಅಹಿಂದ ಎಂದು ಹೇಳಿ ಬಳಿಕ ಅದನ್ನೂ ಮುಗಿಸಿದರು. ಕನಕ ಕ್ಷೇತ್ರದ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಕಾರಣಕರ್ತರು ಎಂದರು. ಕಾಂಗ್ರೆಸ್ ನವರು ಒಡೆದು ಆಳುವ ನೀತಿ ಅನುಸರಿಸಿದರು. ಲಿಂಗಾಯತ- ವೀರಶೈವರನ್ನು ಒಡೆಯಲು ಮುಂದಾದರು. ಉಡುಪಿಯಲ್ಲಿ ಗೋಪುರ, ದೇವಸ್ಥಾನ ಒಡೆಯಲು ಹೊರಟರು. ಮುಸಲ್ಮಾನರಿಗೆ ಬೇಡದ ಟಿಪ್ಪು ಜಯಂತಿ ಮಾಡಿ ಹಿಂದೂ-ಮುಸ್ಲಿಮರ ನಡುವೆ ಭೇದಭಾವ ತಂದರು ಎಂದು ಆಕ್ಷೇಪ ವ್ಯಕ್ತಪಡಿಸಿದರು.

- Advertisement -


ಹಿಂದೂ, ಕ್ರೈಸ್ತರ ವಿರೋಧವಿದ್ದರೂ ಹಾಗೂ ಮುಸ್ಲಿಮರ ಬೇಡಿಕೆ ಇರದಿದ್ದರೂ ಟಿಪ್ಪು ಜಯಂತಿ ಆಚರಣೆ ಆರಂಭಿಸಲಾಯಿತು. ಶಾದಿ ಭಾಗ್ಯದಲ್ಲೂ ಎಲ್ಲ ಮುಸ್ಲಿಮರಿಗೆ ಅವಕಾಶ ಕೊಡದೆ ಅನ್ಯಾಯ ಮಾಡಿದರು. ಅಲ್ಪಸಂಖ್ಯಾತ ಪತ್ರಕರ್ತರಿಗೆ ಲ್ಯಾಪ್ ಟಾಪ್ ಕೊಡುವ ಯೋಜನೆಯಲ್ಲೂ ಎಲ್ಲ ಅಲ್ಪಸಂಖ್ಯಾತರನ್ನು ಪರಿಗಣಿಸಲಿಲ್ಲ ಎಂದು ವಿವರಿಸಿದರು. ಶಾಲಾ ಮಕ್ಕಳಿಗೆ ಪ್ರವಾಸದಲ್ಲೂ ಕೇವಲ ಅಲ್ಪಸಂಖ್ಯಾತ ಮಕ್ಕಳಿಗೆ ಅವಕಾಶ ಕೊಡಲಾಯಿತು. ಹಿಂದುಳಿದವರನ್ನು ದೂರ ಇಡಲಾಯಿತು. ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದ ಮೊದಲ ಮುಖ್ಯಮಂತ್ರಿ ಸಿದ್ರಾಮಣ್ಣ. ಬಿಜೆಪಿ ಹಾಗಲ್ಲ. ಹಿಂದುಳಿದ ವರ್ಗಗಳಿಗೆ ಸದಾ ನ್ಯಾಯ ಕೊಟ್ಟಿದೆ ಎಂದರು.


ಹಿಂದುಳಿದ ವರ್ಗಗಳ ಬಗ್ಗೆ ಕಣ್ಣೀರು ಹಾಕಿ ಮತ ಪಡೆದ ಕಾಂಗ್ರೆಸ್ ಆ ವರ್ಗಕ್ಕೆ ಅನ್ಯಾಯ ಮಾಡಿದೆ. ಆ ಸಮುದಾಯಗಳನ್ನು ಮೆಟ್ಟಿ ಹಾಕುವ ಕೆಲಸ ಮಾಡಿದೆ. ಬಿಜೆಪಿ ಈಗ ಇರುವ ಸ್ಥಾನಕ್ಕಿಂತ ಹೆಚ್ಚು ಪ್ರಮಾಣವನ್ನು ಹಿಂದುಳಿದ ವರ್ಗಕ್ಕೆ ಕೊಡಲಿದೆ ಎಂದು ನುಡಿದರು. ನಿಗಮ ಮಂಡಳಿಗಳಲ್ಲೂ ಬಾಕಿ ಉಳಿದ ಸಣ್ಣ ಸಮುದಾಯಗಳಿಗೆ ಅವಕಾಶ ಮಾಡಿ ಕೊಡಲಿದ್ದೇವೆ. ಹಿಂದುಳಿದ ವರ್ಗದ ಶಾಂತಾರಾಮ ಸಿದ್ದಿ, ಅಶೋಕ ಗಸ್ತಿ ಅವರಂಥವರಿಗೆ ಅವಕಾಶ ಮಾಡಿಕೊಟ್ಟ ಪಕ್ಷ ಬಿಜೆಪಿ ಎಂದು ತಿಳಿಸಿದರು. ಕಾಂಗ್ರೆಸ್- ಜೆಡಿಎಸ್ ನಲ್ಲಿ ಪೇಮೆಂಟ್ ಸೀಟಿದೆ. ಇಲ್ಲಿ ಹಾಗಲ್ಲ ಎಂದರು.

Join Whatsapp