ಬೆಂಗಳೂರು : ಗಾಂಧೀಜಿಯವರನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ದೇಶದ್ರೋಹಿಗಳು ಹೆಚ್ಚಾಗುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.
ಗಾಂಧೀಜಿಯವರ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು ಈ ಮಾತುಗಳನ್ನಾಡಿದರು.
ಗಾಂಧೀಜಿಯವರು ಯಾರನ್ನು ಶತ್ರುಗಳೆಂದು ತಿಳಿದು ಅವರ ವಿರುದ್ಧ ಹೋರಾಡಿದರೋ, ಅವರು ಗಾಂಧೀಜಿಯವರನ್ನು ಹತ್ಯೆ ಮಾಡಲಿಲ್ಲ. ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ನಾಥುರಾಮ್ ಗೋಡ್ಸೆ ಎಂಬ ದೇಶದ್ರೋಹಿ ಗಾಂಧೀಜಿಯವರನ್ನು ಹತ್ಯೆಮಾಡಿದ್ದ ಎಂಬುದನ್ನು ನಾವು ಮರೆಯಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು.
ಗಾಂಧೀಜಿಯವರು ಹುತಾತ್ಮರಾದ ದಿನವನ್ನು ನಾವು ಹುತಾತ್ಮರ ದಿನವೆಂದು ಆಚರಿಸುತ್ತಿದ್ದೇವೆ. ಈ ಮೂಲಕ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸಾವಿರಾರು ದೇಶಭಕ್ತರಿಗೆ ಗೌರವವನ್ನು ಅರ್ಪಿಸುತ್ತಿದ್ದೇವೆ. ಇವರಲ್ಲಿ ಬಹಳಷ್ಟು ಹುತಾತ್ಮರು ಅನಾಮಿಕರಾಗಿಯೇ ಉಳಿದಿದ್ದಾರೆ. ಅವರ ನಿಸ್ವಾರ್ಥವಾದ ದೇಶಭಕ್ತಿ ನಮಗೆಲ್ಲಾ ಆದರ್ಶವಾಗಬೇಕು ಎಂದು ಅವರು ತಿಳಿಸಿದರು.