ಕೋಮುವಾದಿಗಳನ್ನು ಖಂಡಿಸುವಾಗ ಅಗ್ರೆಸಿವ್ ಆಗಿರಬೇಕಾಗುತ್ತದೆ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಚುನಾಯಿತ ಪ್ರತಿನಿಧಿಗಳ ಪದಗ್ರಹಣ ಸಮಾರಂಭ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಶುಕ್ರವಾರ ನಡೆಯಿತು.

- Advertisement -


ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಸ್ಥಾಪನೆಯಾದದ್ದು 1980 ರಲ್ಲಿ. ಈ ಪಕ್ಷದ ಯಾವೊಬ್ಬ ನಾಯಕನೂ ಭಾರತೀಯ ಸ್ವಾತಂತ್ರ್ಯ ಹೋರಾಟಗಾರದಲ್ಲಿ ಪಾಲ್ಗೊಂಡಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಇತಿಹಾಸ ಇರುವುದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ನಾನು ಕಾಂಗ್ರೆಸಿಗ ಎಂಬುದೇ ನಾವು, ನೀವು ಹೆಮ್ಮೆಪಡಬೇಕಾದ ಸಂಗತಿ ಎಂದರು.

ಬಿಜೆಪಿಯವರು ಇತಿಹಾಸ ತಿರುಚುವುದರಲ್ಲಿ, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುವುದರಲ್ಲಿ ಪ್ರವೀಣರು. ಜನರಿಗೆ ಸತ್ಯದ ಅರಿವಾದರೆ ಬಿಜೆಪಿ ಜೊತೆ ಯಾರೂ ಹೋಗಲ್ಲ, ಪಕ್ಷದ ಹಿಂಬಾಲಕರು ಕಡಿಮೆಯಾಗ್ತಾರೆ ಅಂತ ಭಯ. ಸಿ.ಟಿ ರವಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಇವರು ಇತಿಹಾಸ ಓದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಕಾರಣ ಇತಿಹಾಸದ ಕನಿಷ್ಠ ಜ್ಞಾನ ಇದ್ದರೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರ ಬಗ್ಗೆ ಹಗುರಾಗಿ ಮಾತನಾಡುತ್ತಾ ಇರಲಿಲ್ಲ ಎಂದು ಹೇಳಿದರು.

- Advertisement -

ನಮಗೆ ದೇಶಪ್ರೇಮದ ಪಾಠ ಮಾಡುವ ಬಿಜೆಪಿಯವರು ಎಂದಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ಮಾಡಿದ್ರಾ? ಮೊಘಲರು, ಬ್ರಿಟಿಷರ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿ ಇದ್ದವರು ಇದೇ ಆರ್.ಎಸ್.ಎಸ್ ಹಾಗೂ ಬಿಜೆಪಿಯ ಹಿಂದಿನ ತಲೆಮಾರಿನವರಲ್ಲವೇ? ಟಿಪ್ಪುವಿನ ಆಸ್ಥಾನದಲ್ಲಿ ದಿವಾನರಾಗಿದ್ದವರು ಪೂರ್ಣಯ್ಯನವರಲ್ಲವೇ? ಟಿಪ್ಪು ಜಯಂತಿಗೆ ವಿರೋಧ ಮಾಡೋರು ಪೂರ್ಣಯ್ಯನನ್ನು, ಕೃಷ್ಣಸ್ವಾಮಿಯನ್ನು ಏಕೆ ವಿರೋಧ ಮಾಡಲ್ಲ? ಅವರೆಲ್ಲ ನಮ್ಮವರು ಎಂಬ ಭಾವನೆಯೇ? ನಾಚಿಕೆಯಾಗಬೇಕು ಬಿಜೆಪಿ ನಾಯಕರಿಗೆ ಎಂದು ಹರಿಹಾಯ್ದರು.

ರಕ್ಷಾ ರಾಮಯ್ಯ ಸಜ್ಜನ, ಸಂಭಾವಿತ ನಾಯಕ. ಆದರೆ ಕೋಮುವಾದಿಗಳನ್ನು ಖಂಡಿಸುವಾಗ ಅಗ್ರೆಸಿವ್ ಆಗಿರಬೇಕಾಗುತ್ತದೆ. ಬಿಜೆಪಿಯವರು ಢೋಂಗಿಗಳು. ಇಂತಹಾ ಮೋಸಗಾರರು, ಸುಳ್ಳು ಹೇಳುವವರು ಭಾರತದ ರಾಜಕಾರಣದಲ್ಲಿ ಬೇರಾರು ಇಲ್ಲ. ಮೋದಿ ಮೋದಿ ಎಂದು ಕುಣಿಯುತ್ತಿದ್ದ ಯುವಜನತೆ ಇಂದು ಮೋದಿಯವರ ಆಡಳಿತದಿಂದ ಭ್ರಮನಿರಸನರಾಗಿದ್ದಾರೆ. ಹಿಂದೆ ನಾವು ಹೋದ ಕಡೆ ಕೆಲವರು ಮೋದಿ ಮೋದಿ ಎಂದು ಕೂಗುತ್ತಿದ್ದರು, ಈಗ ಅವರೆಲ್ಲಾ ಎಲ್ಲೋದ್ರಪ್ಪಾ? ಏನಾಯ್ತಪ್ಪ ಅವರ ಕತೆ? ಎಂದು ವ್ಯಂಗ್ಯವಾಡಿದರು.

ಮೋದಿಯವರು ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು, ಏಳು ವರ್ಷದಲ್ಲಿ ಹದಿನಾಲ್ಕು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಉದ್ಯೋಗ ಸೃಷ್ಟಿ ಬದಲು ಹನ್ನೆರಡು ಕೋಟಿ ಉದ್ಯೋಗ ನಷ್ಟವಾಗಿದೆ. ಕೆಲಸ ಕೇಳಿದವರಿಗೆ ಪಕೋಡ ಮಾರಿ ಅಂದರು, ಈಗ ಎಣ್ಣೆ ಬೆಲೆ ಇನ್ನೂರು ಆಗಿದೆ. ಉದ್ಯೋಗವಿಲ್ಲದವರು ಪಕೋಡಾ ಮಾರುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.

ಮೋದಿ ಹೇಳುತ್ತಿದ್ದ ಅಚ್ಚೇ ದಿನ್ ಕತೆ ಏನಾಯ್ತು? ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಕೇಳಿದ್ರೆ ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲ ತೀರಿಸಲು ಬೆಲೆ ಜಾಸ್ತಿಯಾಗಿದೆ ಅಂತಾರೆ. ಇದು ದೊಡ್ಡ ಸುಳ್ಳು. ಮನಮೋಹನ್ ಸಿಂಗ್ ಕಾಲದಲ್ಲಿ ಡೀಸೆಲ್ ವಿಧಿಸುತ್ತಿದ್ದ ರೂ. 3 ಅಬಕಾರಿ ಸುಂಕವನ್ನು 34 ಕ್ಕೆ ಏರಿಸಿದ್ದು ನರೇಂದ್ರ ಮೋದಿ ಸರ್ಕಾರ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ರೂ. 9 ರಿಂದ ರೂ. 36 ಕ್ಕೆ ಏರಿಕೆ ಮಾಡಿದ್ದು ನರೇಂದ್ರ ಮೋದಿ ಅವರು. ಇದನ್ನು ಹೇಳಿದ್ರೆ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಾರೆ ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಮನಮೋಹನ್ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರದ ಕಾರ್ಯಕ್ರಮಗಳನ್ನು ನಾವು ಜನರಿಗೆ ಮುಟ್ಟಿಸಿದ್ದರೆ ನಾವು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ವಿಫಲರಾಗುತ್ತಿರಲಿಲ್ಲ. ಪ್ರತಿ ಬೂತ್ ನಲ್ಲಿ ತಂಡ ರಚನೆಯಾಗಬೇಕು. ಮಾಧ್ಯಮಗಳು ನಮ್ಮನ್ನು ಬೆಂಬಲಿಸುತ್ತವೋ ಇಲ್ಲವೋ ಗೊತ್ತಿಲ್ಲ. ನಿಮ್ಮದೇ ಆದ ಜನ, ತಂಡ ಇರಬೇಕು ಎಂದರು.

ಈ ದೇಶದಲ್ಲಿ ವಿದ್ಯಾವಂತ, ಬುದ್ಧಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಪ್ರಜ್ಞಾವಂತರಿರಬೇಕು. ನಾವು ಈ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಅದು ಇಬ್ಬರಿಂದ ಮಾತ್ರ ಸಾಧ್ಯ. ಒಂದು ಮಹಿಳೆಯರು, ಮತ್ತೊಂದು ಯುವಕರು. ಇವರಿಬ್ಬರು ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.



Join Whatsapp