ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಸಾಕು ಕರು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಬಜರಂಗ ದಳದ ಕಾರ್ಯಕರ್ತರು ಮಹಿಳೆ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡಿರುವ ವರದಿಗಳನ್ನು ಕೇಳಿ ಅತೀವ ಬೇಸರವಾಗಿದೆ. ಬಜರಂಗದಳದ ಕಾರ್ಯಕರ್ತರು ರಣಹದ್ದುಗಳ ರೀತಿ ವರ್ತಿಸುತ್ತಿದ್ದಾರೆ. ಸುದ್ದಿಯಲ್ಲಿ ಬರಲು ಅಮಾಯಕ ಜನರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥಿತವಾಗಿಲ್ಲ. ಇದು ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಲಿ. ಬಿಜೆಪಿಯು ನಕಲಿ ಚೌಕಿದಾರರಿಂದ ತುಂಬಿದೆ ಮತ್ತು ಕರ್ನಾಟಕವು ಯುಪಿಯಂತಾಗುವುದನ್ನು ತಪ್ಪಿಸಲು ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಹಿಂದೂ ಸಂಸ್ಕೃತಿಯ ರಕ್ಷಕರು ಎಂದು ಬಜರಂಗದಳ ಕಾರ್ಯಕರ್ತರು ಹೇಳಿಕೊಳ್ಳುತ್ತಾರೆ. ಅವರ ಯಾವ ಧಾರ್ಮಿಕ ಗ್ರಂಥಗಳು ಮಂಗಳಸೂತ್ರ ಮತ್ತು ಸೀರೆ ಎಳೆಯಲು ಕೇಳಿಕೊಂಡಿವೆ? ಅಥವಾ ಅವರ ಪೂರ್ವಜರು ಕಲಿಸಿದ ಪಾಠವೇ? ಬಜರಂಗದಳಕ್ಕೆ ಸೇರಿದ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಕರ್ನಾಟಕದ ಪೊಲೀಸ್ ಇಲಾಖೆಯು ಜನಸಾಮಾನ್ಯರಿಗಾಗಿ ಕೆಲಸ ಮಾಡುತ್ತಿದೆಯೇ ಅಥವಾ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಗೂಂಡಾಗಳಿಗಾಗಿ ಕೆಲಸ ಮಾಡುತ್ತಿದೆಯೇ? ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಸಂಘಪರಿವಾರದವರು ರಣಹದ್ದುಗಳ ರೀತಿ ವರ್ತಿಸುತ್ತಿದ್ದಾರೆ: ನೆಲ್ಯಾಡಿ ಘಟನೆಗೆ ಸಿದ್ದರಾಮಯ್ಯ ಕಿಡಿ
Prasthutha|