ರಾಜ್ಯದಲ್ಲಿದ್ದ ಶಾಂತಿಯ ವಾತಾವರಣವನ್ನು ಬಿಜೆಪಿ ಹಾಳು ಮಾಡುತ್ತಿದೆ: ಸಿದ್ದರಾಮಯ್ಯ ವಾಗ್ದಾಳಿ

Prasthutha|

ಬೆಂಗಳೂರು: ಚಾಮರಾಜ ಪೇಟೆ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಿ.ಟಿ.ರವಿ, ರವಿಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತರ ಹೇಳಿಕೆಗಳು ವಿಭಿನ್ನವಾಗಿವೆ. ಪ್ರಚೋದನೆ ಮಾಡುವುದು ಬಿಜೆಪಿ ನಾಯಕರ ಉದ್ದೇಶ. ಇದು ಗೃಹ ಸಚಿವರ ವೈಫಲ್ಯ ಎತ್ತಿ ತೋರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಹಿಂದೂಗಳನ್ನು ಪ್ರಚೋದಿಸುವುದು ಇವರ ಉದ್ದೇಶ. ಕಾನೂನು ಸುವ್ಯವಸ್ಥೆ ಕಾಪಾಡುವುದು ಇವರಿಂದ ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ ದೇಶ, ರಾಜ್ಯ ಅಭಿವೃದ್ಧಿ ಆಗುವುದಿಲ್ಲ. ಬಿಜೆಪಿಯವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಭಾಷೆ, ಧರ್ಮ, ದ್ವೇಷದ ವಿಚಾರವನ್ನು ಮುಂದೆ ತಂದು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ಎನ್ ಐ ಗೆ ವಹಿಸಲಾಗಿದೆ. ಯಾರಾದರೂ ತನಿಖೆ ನಡೆಸಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ, ಸರ್ಕಾರ ಇದೇ ನಿಲುವನ್ನು ದಿನೇಶ್ ಮತ್ತು ಸುಭಾನ್ ಹತ್ಯೆ ವಿಚಾರದಲ್ಲಿಯೂ ಅನುಸರಿಸಲಿ ಎಂದು ಆಗ್ರಹಿಸಿದರು.

- Advertisement -

ದಿನೇಶ್ ಕೊಲೆಗೆ ಭಜರಂಗ ದಳ, ಸುಭಾನ್ ಹತ್ಯೆಗೆ ಶ್ರೀರಾಮಸೇನೆ ಕಾರಣ. ಹರ್ಷ ಕುಟುಂಬದವರಿಗೆ 25 ಲಕ್ಷ ಪರಿಹಾರ ನೀಡಿದಂತೆ ದಿನೇಶ್ ಮತ್ತು ಸುಭಾನ್ ಕುಟುಂಬದವರಿಗೂ ನೀಡಲಿ. ಹಿಜಾಬ್ ಗದ್ದಲದಿಂದ ಇಲ್ಲಿಯವರೆಗೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಈಗ ಜನ ಬಿಜೆಪಿಯವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

“ಕಾನೂನು ಸುವ್ಯವಸ್ಥೆ ಸರಿ ಇಲ್ಲ, ದ್ವೇಷದ ವಾತಾವರಣ ಇದೆ. ಸಮಾಜದಲ್ಲಿ ಅಶಾಂತಿ ಉಂಟಾಗಿದೆ ಎಂಬ ಕಾರಣಕ್ಕೆ ಕೈಗಾರಿಕೆಗಳು ರಾಜ್ಯದಿಂದ ಹೊರಗೆ ಹೋಗುತ್ತಿವೆ. ಬಂಡವಾಳ ಬರಬೇಕಾದರೆ ರಾಜ್ಯದಲ್ಲಿ ಉತ್ತಮ ವಾತಾವರಣ ಇರಬೇಕು. ಇದ್ದಂತಹ ಅಂತಹ ವಾತಾವರಣವನ್ನು ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ” ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Join Whatsapp