ಪೂರ್ಣಾವಧಿ ಸಿಎಂ ಸ್ಥಾನದ ಭರವಸೆ ನಂತರ ಸಿದ್ದರಾಮಯ್ಯ ಗ್ಯಾರಂಟಿ ಜಾಮೀನಿಗೆ ಸಹಿ ಹಾಕಿದ್ದಾರೆ: ಮುನಿರತ್ನ

Prasthutha|

ಬೆಂಗಳೂರು: ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್​ ನಾಯಕರು ಭರವಸೆ ನೀಡಿದ ನಂತರವೇ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಜಾಮೀನಿಗೆ ಸಹಿ ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ.

- Advertisement -

ಲೋಕಸಭಾ ಚುನಾವಣೆ ಸಿದ್ಧತೆಗಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಇತ್ತು, ಭಾರೀ ಬೇಡಿಕೆ ಇತ್ತು. ಆದರೆ ನಾನು ಹೋಗಲಿಲ್ಲ. ನನಗೆ ಕಾಂಗ್ರೆಸ್​ನಲ್ಲಿ ಅನೇಕ ಸ್ನೇಹಿತರು ಇದ್ದಾರೆ. ಅವರು ನೀಡಿದ ಮಾಹಿತಿ ಪ್ರಕಾರ, ಚುನಾವಣಾ ಪೂರ್ವದಲ್ಲಿ ಸುರ್ಜೇವಾಲಾ, ವೇಣುಗೋಪಾಲ್ ನೇತೃತ್ವದಲ್ಲಿ ಒಂದು ಸಭೆ ನಡೆದಿತ್ತು. ಅಂದು ಗ್ಯಾರಂಟಿ ಕಾರ್ಡ್​​ಗೆ ಸಹಿ ಹಾಕುವ ಬಗ್ಗೆ ಚರ್ಚೆ ಆಯಿತು. ಡಿ.ಕೆ. ಶಿವಕುಮಾರ್ ಒಬ್ಬರೇ ಸಹಿ ಹಾಕುವ ನಿರ್ಣಯಕ್ಕೆ ಬಂದಾಗ ಇದು ತಪ್ಪಾಗುತ್ತದೆ, ಸಿದ್ದರಾಮಯ್ಯ ಕೂಡ ಸಹಿ ಹಾಕಬೇಕು ಎಂದು ಹೇಳಿದ್ದಾರಂತೆ. ಸಹಿ ಹಾಕುತ್ತೇನೆ, ಆದರೆ ಐದು ವರ್ಷ ನನಗೆ ಅಧಿಕಾರ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರಂತೆ. ಇದಕ್ಕೆ ನಾಯಕರು ಒಪ್ಪಿಕೊಂಡ ನಂತರವೇ ಗ್ಯಾರಂಟಿ ಜಾಮೀನಿಗೆ ಸಿದ್ದರಾಮಯ್ಯ ಸಹಿ ಹಾಕಿದ್ದಾರೆ ಎಂದರು.

- Advertisement -

ಈಗಾಗಲೇ ಸಿದ್ದರಾಮಯ್ಯ ತಾನೇ ಮುಂದಿನ ಐದು ವರ್ಷದ ವರೆಗೆ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದನ್ನು ಎಂ.ಬಿ. ಪಾಟೀಲ್ ಮೂಲಕ ಹೇಳಿಸುತ್ತಿದ್ದರು. ಈಗ ಎಂ.ಬಿ. ಪಾಟೀಲ್​ ಅವರನ್ನು ಹೆದರಿಸಿ ಸುಮ್ಮನೆ ಕೂರಿಸಿದ್ದಾರೆ. ಯಾರು ಹೇಗೆ ಹೆದರಿಸಿದರೋ, ಗದರಿದರೋ, ಬೆದರಿಸಿದರೋ ಗೊತ್ತಿಲ್ಲ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್​ನವರು ಪೇ ಸಿಎಂ ಎಂದು ತೇಜೋವಧೆ ಮಾಡಿದರು. ಅವತ್ತೇ ಅವರನ್ನು ಎತ್ತಿಕೊಂಡು ಹೋಗಿ ಒಳಗೆ ಹಾಕಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಬಿಟ್ ಕಾಯಿನ್, ಗುತ್ತಿಗೆದಾರರು 40% ಆರೋಪ ಮಾಡಿದಾಗ ನಾವು ಸರಿಯಾಗಿ ಅವತ್ತೇ ಉತ್ತರ ನೀಡಿರಲಿಲ್ಲ. ಇದು ಕಾಂಗ್ರೆಸ್ ಗೆಲುವಲ್ಲ, ನಮ್ಮ ಸ್ವಯಂ ಅಪರಾಧ. ಇನ್ನೂ ಅನೇಕ ನಮ್ಮ ತಪ್ಪುಗಳು ಇವೆ. ಈಗ ವಿಮರ್ಶೆ ಮಾಡಲು ಹೋಗಲ್ಲ ಎಂದರು.



Join Whatsapp