ಬೆಂಗಳೂರು : ರಾಜ್ಯ ಸರ್ಕಾರ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಕೊರೊನಾದಿಂದ ಮೃತಪಟ್ಟವರ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳುತ್ತಿದೆ ಮತ್ತು ಸೋಂಕಿತರ ಪ್ರಮಾಣ ಇಳಿಮುಖವಾಗಿದೆಯೆಂದು ತೋರಿಸಲು ಸೋಂಕು ಪರೀಕ್ಷೆಯನ್ನೇ ಕಡಿಮೆ ಮಾಡಿದೆ. ಇದು ನಾಡಿನ ಜನತೆಗೆ ಎಸಗುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಜನರನ್ನು ಕತ್ತಲಲ್ಲಿಟ್ಟು ಕೊರೋನಾ ನಿಯಂತ್ರಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರದ ಅಂಕಿ ಅಂಶಗಳ ಕುರಿತು ಜನರಿಗೆ ನಂಬಿಕೆಯೇ ಹೊರಟು ಹೋಗುತ್ತಿದೆ. ಸಾವುಗಳು, ಚಿಕಿತ್ಸೆಗಳು ಎಲ್ಲದರಲ್ಲೂ ಭೀಕರ ಸುಳ್ಳುಗಳನ್ನು ಹೇಳುತ್ತಾ ಬರಲಾಗುತ್ತಿದೆ. ಸೋಂಕು ಪರೀಕ್ಷೆಯ ವಿಚಾರವನ್ನೇ ನೋಡಿದರೂ ಕೂಡ ಏಪ್ರಿಲ್ ತಿಂಗಳ ಕಡೆಯ ವಾರದಲ್ಲಿ ಪ್ರತಿ ದಿನ ಸರಾಸರಿ 1.75 ಲಕ್ಷ ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ಈಗ ಶೇ. 30 ರಷ್ಟು ಕಡಿಮೆಯಾಗಿ ದಿನಕ್ಕೆ ಸರಾಸರಿ 1.15 ಲಕ್ಷ ದಿಂದ 1.24 ಲಕ್ಷಕ್ಕೆ ಇಳಿಕೆಯಾಗಿದೆ. 6-5-2021 ರಂದು 26441 ಪರೀಕ್ಷೆಗಳನ್ನು ಮಾಡಲಾಗಿದ್ದರೆ 11-5-2021 ರಂದು ಕೇವಲ 116238 ಪರೀಕ್ಷೆಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.