ಬೆಂಗಳೂರು: ಹಾವೇರಿ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಸಿರಿ ಸ್ಕಾಲರ್ ಶಿಪ್ ಗೆ ಕನ್ನ ಹಾಕಿದ ಪ್ರಕರಣದಲ್ಲಿ ಅಚ್ಚರಿ ಪಡುವಂತಹದೇನಿಲ್ಲ. ಬಿಜೆಪಿ ಸರ್ಕಾರದ 40% ಕಮಿಷನ್ ಸರ್ಕಾರದಿಂದ ಸ್ಪೂರ್ತಿ ಪಡೆದಿರುವ ಸರ್ಕಾರಿ ನೌಕರರು ನೇರವಾಗಿ ವಿದ್ಯಾರ್ಥಿಗಳು, ಮಹಿಳೆಯರು, ರೈತರು ಹೀಗೆ ಎಲ್ಲರ ಸುಲಿಗೆಗೆ ಇಳಿದಿದ್ದಾರೆ. ಒಂದೆಡೆ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಸೇರಿದಂತೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳಿಗೆ ಹಣ ನೀಡದೆ ನಿರ್ಲಕ್ಷಿಸುತ್ತಿರುವ ಬಿಜೆಪಿ ಸರ್ಕಾರ, ಇನ್ನೊಂದೆಡೆ ಒಂದಿಷ್ಟು ಮಂಜೂರಾಗಿರುವ ಹಣವನ್ನು ಕೂಡಾ ಬಿಡದೆ ಸರ್ಕಾರವೇ ಲೂಟಿ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಹಾಸ್ಟೆಲ್ ನಲ್ಲಿ ಪ್ರವೇಶ ಸಿಗದೆ ಇದ್ದ ವಿದ್ಯಾರ್ಥಿಗಳು ಕೊಠಡಿ ಬಾಡಿಗೆಗೆ ಪಡೆದು ಅಡುಗೆ ಮಾಡಿಕೊಂಡು ವ್ಯಾಸಂಗ ಮಾಡಲು ನೆರವಾಗುವಂತೆ ತಿಂಗಳಿಗೆ ರೂ. 1500 ನೀಡುವ ಯೋಜನೆ ವಿದ್ಯಾಸಿರಿ. ನನ್ನ ಸ್ವಂತ ಅನುಭವದ ಆಧಾರದಲ್ಲಿ ರೂಪಿಸಿದ್ದ ಈ ಯೋಜನೆಗೆ ರಾಜ್ಯ ಬಿಜೆಪಿ ಸರ್ಕಾರ ಕಲ್ಲು ಹಾಕುತ್ತಿದೆ. 2017-18ರ ಸಾಲಿನಲ್ಲಿ ವಿದ್ಯಾಸಿರಿ ಯೋಜನೆಗೆ 88,549 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಈ ಯೋಜನೆಗೆ ಹಣ ನೀಡದೆ ಹಾಸ್ಟೆಲ್ ಸೌಲಭ್ಯ ಇಲ್ಲದ ಹಿಂದುಳಿದ ಜಾತಿಯ ವಿದ್ಯಾರ್ಥಿಗಳನ್ನು ಬೀದಿಗೆ ತಳ್ಳುತ್ತಿದೆ. ವಿದ್ಯಾಸಿರಿ ಯೋಜನೆಯೊಂದೇ ಅಲ್ಲ, ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಹಾಸಿಗೆ-ಹೊದಿಕೆ-ಸೋಪ್ ಗಳನ್ನೂ ಕೊಟ್ಟಿಲ್ಲ. ವಿದ್ಯಾರ್ಥಿ ವೇತನವನ್ನೂ ಬಾಕಿ ಇಟ್ಟುಕೊಳ್ಳಲಾಗಿದೆ. ಹಾಸ್ಟೆಲ್ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡಿಲ್ಲ. ಇವೆಲ್ಲವೂ ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಲ್ಲಿ ಶಿಕ್ಷಣವನ್ನು ಪ್ರೊತ್ಸಾಹಿಸಲು ಜಾರಿಗೆ ತಂದಿರುವ ವಿದ್ಯಾಸಿರಿ ಯೋಜನೆಗೆ ಅವಶ್ಯಕ ಹಣವನ್ನು ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಮಂಜೂರು ಮಾಡಬೇಕು. ಈಗಾಗಲೇ ಮಂಜೂರಾಗಿರುವ ಹಣವನ್ನು ಸುಲಿಗೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.