ಬೆಂಗಳೂರು: ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲೆಳೆದ ಘಟನೆ ನಡೆದಿದೆ. ಪ್ರಧಾನಿ ಮಾತನಾಡುತ್ತಿದ್ದಾಗ ಜನರು ‘ಮೋದಿ ಮೋದಿ’ ಎಂದು ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದರು. ಈ ಸಂದರ್ಭ ಪ್ರಧಾನಿ ಸಿಎಂ ಸಿದ್ದರಾಮಯ್ಯರತ್ತ ನೋಡಿ, “ಮುಖ್ಯಮಂತ್ರಿ ಜೀ ಐಸಾ ಹೋತಾ ರೆಹ್ತಾ ಹೈ (ಸಿಎಂ ಸರ್, ಇದು ನಡೆಯುತ್ತಲೇ ಇರುತ್ತೆ)” ಎಂದು ಹೇಳಿದರು. ಅದಕ್ಕೆ ಸಿಎಂ ಸಿದ್ದರಾಮಯ್ಯ, ಹತ್ತಿರವಿದ್ದ ವಿಪಕ್ಷ ನಾಯಕ ಆರ್ ಅಶೋಕ್ ನಗುತ್ತಾ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಬೋಯಿಂಗ್’ನ ಹೊಸ ಗ್ಲೋಬಲ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದಾರೆ.
ವಾಯುಯಾನ ಮತ್ತು ಏರೋಸ್ಪೇಸ್’ನಲ್ಲಿ ಭಾರತ ಸಾಧಿಸಿದ ದಾಪುಗಾಲು ಮತ್ತು ಈ ಕ್ಷೇತ್ರದಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರವನ್ನ ಪ್ರಧಾನಿ ಶ್ಲಾಘಿಸಿದರು, ದೇಶವು ಜಾಗತಿಕ ವಾಯುಯಾನ ಮಾರುಕಟ್ಟೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ವಿಮಾನ ತಯಾರಕ ಬೋಯಿಂಗ್’ನ ಹೊಸ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್ ಉದ್ಘಾಟಿಸಿದ ನಂತ್ರ ಮಾತನಾಡಿದ ಅವರು, ಯುದ್ಧ ವಿಮಾನ ಅಥವಾ ನಾಗರಿಕ ವಿಮಾನವಾಗಿರಲಿ ವಾಯುಯಾನ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದು ಪ್ರಧಾನಿ ಹೇಳಿದರು.