ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಕ್ಕಿನಂತೆ ಅಂಡಲೆಯುತ್ತಿದ್ದಾರೆ. ಒಮ್ಮೆ ಕೋಲಾರ, ಮತ್ತೊಮ್ಮೆ ಚಾಮರಾಜನಗರ ಕ್ಷೇತ್ರಕ್ಕೆ ಹೋಗುತ್ತಾರೆ. ಮತ್ತೆ ಚಾಮುಂಡೇಶ್ವರಿ, ಬೀಳಗಿ ಬಾದಾಮಿಗೆ ಬರ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಲೇವಡಿ ಮಾಡಿದ್ದಾರೆ.
ಧಾರವಾಡ ಹೊರವಲಯ ಗರಗ ಕ್ರಾಸ್ನಲ್ಲಿ ಶ್ರೀ ಗುರು ಮಡಿವಾಳೇಶ್ವರ ದ್ವಾರ ಬಾಗಿಲು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸ್ಥಿತಿ ಸುಟ್ಟ ಬೆಕ್ಕಿನಂತಾಗಿದೆ. ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಮಾವೇಶ ಮಾಡಿದ್ದರು. ಅವರ ಶಿಷ್ಯ ಶಾಸಕ ಜಮೀರ್ ಅಹ್ಮದ್ ಖಾನ್ ಹತ್ತು ಲಕ್ಷ ಜನ ಸೇರಿದ್ದಾಗಿ ತಿಳಿಸಿದ್ದರು. ರಾಜ್ಯದಲ್ಲಿ 160 ಸಾಮಾನ್ಯ ವಲಯಕ್ಕೆ ಮೀಸಲಾಗಿರುವ ಕ್ಷೇತ್ರಗಳಿದ್ದರೂ ಸಿದ್ದರಾಮಯ್ಯ ಅವರಿಗೆ ಒಂದು ಕ್ಷೇತ್ರ ಸಹ ಸಿಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚುನಾವಣೆ ಸ್ಪರ್ಧೆ ಬೇಡವೆಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ಸಂತೋಷ್ ಲಾಡ್ ಹೇಳಿರುವ ಬಗ್ಗೆ ಕೇಳಿದಾಗ, ಸಂತೋಷ್ ಲಾಡ್’ಗೆ ತಮ್ಮ ಇಬ್ಬರು ನಾಯಕರು ಸೋಲ್ತಾರೆ ಎಂದು ಅನ್ನಿಸಿರಬಹುದು. ಹಾಗಾಗಿ ಈ ರೀತಿ ಮಾತನಾಡಿದ್ದು, ಅದು ಅವರ ಪಕ್ಷದ ವಿಚಾರ ಎಂದರು.
ಇದೇ ವೇಳೆ ಯತ್ನಾಳ್ ಮೀಸಲಾತಿ ಹೋರಾಟ ಕಾಂಗ್ರೆಸ್ ಬಿ ಟೀಮ್ ಎಂಬ ನಿರಾಣಿ ಹೇಳಿಕೆಗೆ ತಿರುಗೇಟು ನೀಡಿದರು. ಬಿ ಟೀಮ್ , ಎ ಟೀಮ್ ಎನ್ನುವುದು ಕೆಲವು ದಿನಗಳಲ್ಲಿ ಗೊತ್ತಾಗಲಿದೆ. ಸಮಾಜಕ್ಕೆ ನ್ಯಾಯ ಕೊಡಿಸಲು ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ. ನಾನು, ಕಡಾಡಿ ಸೇರಿ ಬಿಜೆಪಿಯವರೇ ಹೋರಾಟದಲ್ಲಿದ್ದೇವೆ. ಕಾಶಪ್ಪನವರಿಗೆ ಪಂಚಮಸಾಲಿ ಹೋರಾಟಕ್ಕೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಪಕ್ಷಾತೀತ ವಿಚಾರ. ಹಾಗೆ ಹರಿಹರ ಪೀಠಕ್ಕೆ ಜೆಡಿಎಸ್’ನವರು ಅಧ್ಯಕ್ಷರಾಗಿದ್ದಾರೆ ಎಂದರು.
ಪರೇಶ್ ಮೇಸ್ತಾ ಪ್ರಕರಣದ ಬಗ್ಗೆ ಇನ್ನೊಮ್ಮೆ ತನಿಖೆ ಮಾಡಿಸುವ ಚಿಂತನೆ ನಡೆದಿದೆ. ಇನ್ನೊಮ್ಮೆ ಪುನರ್ ತನಿಖೆ ಆಗಬೇಕಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪರಿಶೀಲನೆ ಮಾಡುವಂತೆ ಸರ್ಕಾರ ಈಗಾಗಲೇ ಸಿಬಿಐಗೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಆಗುತ್ತಾರೆ. ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆಂಬ ಸುದ್ದಿ ಸುಳ್ಳು. ರಮೇಶ್ ಜಾರಕಿಹೊಳಿ ಆದಷ್ಟು ಬೇಗ ಮಂತ್ರಿ ಆಗಲಿದ್ದು, ಅವರ ಎಲ್ಲಾ ಭವಿಷ್ಯ ಬಿಜೆಪಿಯಲ್ಲಿದೆ. ಮಂತ್ರಿ ಮಂಡಲ ಪುನರ್ ರಚನೆ ಆಗಬಹುದು. ಆದರೆ ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಇಲ್ಲ ಎಂದರು.