ಮೈಸೂರು: ತನಗೆ ಬೇಡ ಎಂದಿದ್ದರೂ ಜೀರೊ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದ ಮೈಸೂರು ಪೊಲೀಸ್ ಆಯುಕ್ತರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು. ಸಿದ್ದರಾಮಯ್ಯ ಅವರು ನನಗೆ ಜೀರೊ ಟ್ರಾಫಿಕ್ ಯಾಕೆ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಮೈಸೂರು ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯಿತಿಗೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಜೀರೊ ಟ್ರಾಫಿಕ್ಸ್ ಸೌಲಭ್ಯ ಕಲ್ಪಿಸಿದ್ದಕ್ಕಾಗಿ ಪೊಲೀಸ್ ಆಯುಕ್ತರ ಮೇಲೆ ಗರಂ ಆದರು. “ಜೀರೊ ಟ್ರಾಫಿಕ್ ಏಕೆ ಮಾಡಿದ್ದೀರಾ? ನನಗೆ ಜೀರೊ ಟ್ರಾಫಿಕ್ ಸೌಲಭ್ಯ ಬೇಡ ಅಂತ ಹೇಳಿರೋದು ನಿಮಗೆ ಗೊತ್ತಿದೆಯಾ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದಾಗ ಏನನ್ನೂ ಮಾತನಾಡದೇ ಪೊಲೀಸ್ ಆಯುಕ್ತರು ನಿಂತಿದ್ದರು. ಆಗ “DONT DO THAT” ಎಂದು ಸಿದ್ದರಾಮಯ್ಯ ಅವರು ಪೊಲೀಸ್ ಆಯುಕ್ತರಿಗೆ ಖಡಕ್ ವಾರ್ನಿಂಗ್ ಮಾಡಿದರು.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಜೀರೊ ಟ್ರಾಫಿಕ್ ಸೌಲಭ್ಯ ತ್ಯಜಿಸಿದ್ದರು. “ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೊ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ”ಎಂದು ಸಿದ್ದರಾಮಯ್ಯ ತಿಳಿಸಿದ್ದರು.