ಮಡಿಕೇರಿ: ಸಿದ್ದಾಪುರ ಗ್ರಾಮ ಪಂಚಾಯಿತಿಯ ಆಡಳಿತದ ವೈಫಲ್ಯವನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ಕಾರಣ ನನ್ನ ಮೇಲೆ ವಿನಾ ಕಾರಣ ಆರೋಪ ಮಾಡಲಾಗುತ್ತಿದೆ ಎಂದು ಸುಬ್ರಮಣಿ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ಮಾರುಕಟ್ಟೆಯಲ್ಲಿರುವ ಗ್ರಾಮ ಪಂಚಾಯಿತಿ ಮಳಿಗೆಯಲ್ಲಿ ನಡೆಸುತ್ತಿರುವುದಾಗಿ ನಡೆಸದ ಹರಾಜು ಪ್ರಕ್ರಿಯೆಗೆ ದಾಖಲೆ ಸೃಷ್ಟಿ ಮಾಡಿದೆ. ಅದರೆ ವ್ಯಾಪಾರಸ್ಥರು ಸಿದ್ದಾಪುರ ಪಟ್ಟಣದಲ್ಲಿ ಖಾಸಗಿ ಕಟ್ಟಡಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಮಳಿಗೆಗಳು ಮಾರುಕಟ್ಟೆಯಲ್ಲಿ ಪಾಳು ಬಿದ್ದಿದ್ದು ಅದನ್ನು ಗ್ರಾಮ ಪಂಚಾಯತಿ ಕಸ ಸಂಗ್ರಹಣೆಗೆ ಬಳಸುತ್ತಿದೆ. ಮಾಂಸ ಮಾರಾಟಕ್ಕೆ ಮಳಿಗೆ ನೀಡುವುದಾಗಿ ನನ್ನ ಬಳಿಯಿಂದ 1 ಲಕ್ಷದ 2 ಸಾವಿರ ರೂಪಾಯಿಗಳನ್ನು ಪಂಚಾಯಿತಿ ಪಡೆದುಕೊಂಡಿದ್ದು ಇದುವರೆಗೂ ಮಳಿಗೆ ಹಸ್ತಾಂತರಿಸಲಿಲ್ಲ. ಗ್ರಾಮ ಪಂಚಾಯತಿ ಮಾತ್ರ ಮಳಿಗೆ ನೀಡದೆ ಇನ್ನು ನೀವು 13 ಸಾವಿರ ರೂಪಾಯಿ ನೀಡಲು ಬಾಕಿ ಇದೆ ಎಂದು ಬೆದರಿಕೆ ಹಾಕುತಿದೆ. ನಾನು ಸಿದ್ದಾಪುರ ಪಟ್ಟಣದಲ್ಲಿ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ಕೋಳಿ ವ್ಯಾಪಾರ ಮಾಡಿಕೊಂಡಿರುತ್ತೇನೆ. ದೊರಕದ ಮಳಿಗೆಗೆ ನೀಡಿದ್ದ ಹಣ ವಾಪಾಸ್ಸು ಕೇಳಿ ಮನವಿ ನೀಡಿದ್ದೇನೆ. ನಾನು ಮಳಿಗೆಗೆ ಬಾಡಿಗೆ ಹಣ ನೀಡಿಲ್ಲ ಎಂದು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದೆ, ಹಾಗಿದ್ದಲ್ಲಿ ನನಗೆ ನೀಡಿದ ಮಳಿಗೆಗೆ ಅವರು ಬೀಗ ಹಾಕಲಿ. ಮಳಿಗೆ ನೀಡದ ಕಾರಣಕ್ಕೆ ಬೀಗ ಹಾಕಲು ಸಾಧ್ಯವಾಗುತಿಲ್ಲ. ಅದರಿಂದ ಇಲ್ಲಸಲ್ಲದ ಆರೋಪ ಮಾಡಿ ನನಗೆ ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ದಾಖಲೆಗಳು ನನ್ನ ಬಳಿ ಇದೆ. ನಾನು ಕಷ್ಟಪಟ್ಟು ದುಡಿದ ಹಣವನ್ನು ಪಂಚಾಯಿತಿಗೆ ನೀಡಿದ್ದೇನೆ. ಅದು ವಾಪಸ್ಸು ನೀಡಲಿ ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ನಾನು ಎಲ್ಲಿ ಕೂಡ ಪತ್ರಕರ್ತ ಎಂದು ಹೇಳಿ ಕೊಂಡಿಲ್ಲ ಎಂದು ಕೋಳಿ ಮಾಂಸ ವ್ಯಾಪಾರಿ ಸುಬ್ರಮಣಿ ತಿಳಿಸಿದರು.