ಸುಳ್ಯ: ಇಂತಹ ಹತ್ಯಾ ಕೃತ್ಯಗಳನ್ನು ನೀವು ಇನ್ನಾದರೂ ನಿಲ್ಲಿಸಬಾರದೇ ಎಂದು ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನಾ ಅವರು ಗುರುವಾರ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಪ್ರಶ್ನಿಸಿದ ಪ್ರಸಂಗ ನಡೆದಿದೆ.
ನೂತನಾ ಅವರ ನಿವಾಸಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ವೇಳೆ ನೂತನಾ ಅವರು ಎಲ್ಲರ ಸಮ್ಮುಖದಲ್ಲೇ, ಭಟ್ ಅವರನ್ನು ಉದ್ದೇಶಿಸಿ, ಇನ್ನಷ್ಟು ಕೊಲೆಯಾಗಲು ಅವಕಾಶ ನೀಡಬೇಡಿ, ಯಾರದೋ ಪತ್ನಿ, ಯಾರದೋ ತಾಯಿಯ ಮಗ, ಯಾರದೋ ಸೋದರ ಸಾಯುತ್ತಿದ್ದಾರೆ. ಇಂತಹ ಕೃತ್ಯಗಳನ್ನು ಇನ್ನಾದರೂ ನಿಲ್ಲಿಸಬಾರದೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ನೂತನ ಅವರು ಕೇಳಿದ ಪ್ರಶ್ನೆಯಿಂದ ಕಲ್ಲಡ್ಕ ಪ್ರಭಾಕರ್ ಭಟ್ ತಬ್ಬಿಬ್ಬಾದರು. ನಂತರ ಸಾವರಿಸಿಕೊಂಡು ನೂತನ ಅವರನ್ನು ಸಮಾಧಾನ ಪಡಿಸಿದರು.
ನಾನು ಪತಿಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದೆ. ಅವರ ಎಲ್ಲ ಕಾರ್ಯ ಗಳಿಗೆ ನೆರವಾಗುತ್ತಿದ್ದೆ. ಕೆಲವೊಮ್ಮೆ ನಮ್ಮ ಮನೆಗೆ ಇಪ್ಪತ್ತು-ಮೂವತ್ತು ಸಂಘಪರಿವಾರದ ಕಾರ್ಯಕರ್ತರು ಬರುತ್ತಿದ್ದರು. ಅವರೆಲ್ಲರಿಗೂ ಊಟೋಪಚಾರ ಮಾಡಿಕೊಡುತ್ತಿದ್ದೆ. ಅವರ ಯಾವುದೇ ಕೆಲಸಗಳಿಗೆ ನಾನು ತಡೆ ಯಾಗಿರಲಿಲ್ಲ. ಆದರೆ ಅಂಗಡಿ ಬಾಗಿಲಿಗೆ ಬಂದು ನನ್ನ ಪತಿಯನ್ನು ಹತ್ಯೆ ಮಾಡುವಾಗ ಇವರೆಲ್ಲ ಎಲ್ಲಿದ್ದರು ಎಂದು ನೂತನಾ ಆಕ್ರೋಶ ವ್ಯಕ್ತಪಡಿಸಿದರು.