ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲ ಸ್ತರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪೂರ್ಣ ಮೀಸಲಾತಿ ಕೊಡುವ ಪ್ರಸ್ತಾಪಕ್ಕೆ ಹಲವು ಉದ್ಯಮಿಗಳ ವಿರೋಧ ವ್ಯಕ್ತವಾಗಿದೆ.
ಫೋನ್ ಪೆ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪೋಸ್ಟ್ ಮಾಡಿದ್ದು, ತನ್ನ ಮಕ್ಕಳು ತಮ್ಮ ಸ್ವಂತ ಊರಿನಲ್ಲಿ ಕೆಲಸಕ್ಕೆ ಸೇರಲು ಅನರ್ಹರಾ ಎಂದು ಪ್ರಶ್ನಿಸಿದ ಅವರು ರಾಜ್ಯ ಸರ್ಕಾರ ರೂಪಿಸಿದ ಮಸೂದೆಯನ್ನು ನಾಚಿಕೆಗೇಡಿತನ ಎಂದು ಬಣ್ಣಿಸಿದ್ದಾರೆ.
‘ನನಗೆ 46 ವರ್ಷ ವಯಸ್ಸಾಗಿದೆ. ಯಾವುದೇ ರಾಜ್ಯದಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ವಾಸಿಸಿಲ್ಲ. ನನ್ನ ತಂದೆ ನೇವಿಯಲ್ಲಿ ಕೆಲಸ ಮಾಡಿದ್ದಾರೆ. ದೇಶಾದ್ಯಂತ ಅವರ ಪೋಸ್ಟಿಂಗ್ ಆಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗ ಗಳಿಸಲು ಅರ್ಹರಲ್ಲವಾ? ನಾನು ಕಂಪನಿಗಳನ್ನು ಸ್ಥಾಪಿಸಿದ್ದೇನೆ. ದೇಶಾದ್ಯಂತ 25,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದ್ದೇನೆ. ನನ್ನ ಮಕ್ಕಳು ಅವರ ಸ್ವಂತ ನಗರದಲ್ಲಿ ಕೆಲಸ ಮಾಡಲು ಅನರ್ಹರಾ? ಇದು ನಾಚಿಕೆಗೇಡಿತನದ ಸಂಗತಿ,’ ಎಂದು ಸಮೀರ್ ನಿಗಮ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.