ಸಂಸದ ಉವೈಸಿ ಮೇಲೆ ಗುಂಡಿನ ದಾಳಿ: ಆರೋಪಿಗಳಿಬ್ಬರ ಜಾಮೀನು ರದ್ದುಪಡಿಸಿದ ಸುಪ್ರೀಂ

Prasthutha|

ನವದೆಹಲಿ: ಉತ್ತರ ಪ್ರದೇಶದಲ್ಲಿ ಸಂಸದ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರ ವಾಹನದ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರಿಗೆ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ ಮತ್ತು ಆರೋಪಿಗಳಿಗೆ ಶರಣಾಗಲು ಒಂದು ವಾರ ಕಾಲಾವಕಾಶ ನೀಡಿದೆ.

- Advertisement -

ಜಾಮೀನು ನೀಡುವಾಗ ಹೈಕೋರ್ಟ್ ಯಾವುದೇ ಕಾರಣವನ್ನು ನೀಡಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಎಂ.ಎಂ. ಸುಂದ್ರೇಶ್ ಅವರನ್ನೊಳಗೊಂಡ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಈ ವಿಚಾರವನ್ನು ಹೊಸದಾಗಿ ಪರಿಗಣಿಸಲು ಹೈಕೋರ್ಟ್’ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ ಮತ್ತು ಒಂದು ವಾರದೊಳಗೆ ಪೊಲೀಸರ ಎದುರು ಶರಣಾಗುವಂತೆ ಸಚಿನ್ ಶರ್ಮಾ ಮತ್ತು ಶುಭಂ ಗುರ್ಜಾರ್ ಎಂಬವರಿಗೆ ಸೂಚಿಸಿದೆ.

- Advertisement -

ಶರಣಾದ ದಿನಾಂಕದಿಂದ ನಾಲ್ಕು ವಾರಗಳಲ್ಲಿ ಇಬ್ಬರು ಆರೋಪಿಗಳ ಜಾಮೀನು ಅರ್ಜಿಗಳನ್ನು ನಿರ್ಧರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್’ಗೆ ಸೂಚಿಸಿದೆ.

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಘೋಷಣೆಗೆ ಒಂದು ವಾರದ ಮೊದಲು ಫೆಬ್ರವರಿ 3ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ದೆಹಲಿಗೆ ಹಿಂದಿರುಗುತ್ತಿದ್ದಾಗ ಹಾಪುರ್’ನಲ್ಲಿ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಶರ್ಮಾ, ಗುರ್ಜರ್ ಮತ್ತು ಆಲಿಮ್ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣ ಮೂರನೇ ಆರೋಪಿ ಆಲಿಮ್’ಗೆ ನೀಡಲಾಗಿದ್ದ ಜಾಮೀನಿನ ಮೇಲ್ಮನವಿ ಅರ್ಜಿಯನ್ನು ಸೆಪ್ಟೆಂಬರ್’ನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

Join Whatsapp