‘ಶೂ’ ಸೋಲ್ ನಲ್ಲಿ ಠಾಕೂರ್ ಹೆಸರು | ಮುಸ್ಲಿಂ ಬೀದಿ ವ್ಯಾಪಾರಿ ಮೇಲೆ ಬಜರಂಗದಳದ ಮುಖಂಡನಿಂದ ಹಲ್ಲೆ

Prasthutha|

ಲಖನೌ : ಶೂ ಸೋಲ್ ನಲ್ಲಿ ‘ಠಾಕೂರ್’ ಎಂಬುದಾಗಿ ಬರೆದಿದೆ ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮುಸ್ಲಿಂ ಬೀದಿ ವ್ಯಾಪಾರಿಯೊಬ್ಬರ ಮೇಲೆ ಬಜರಂಗ ದಳದ ನಾಯಕನೊಬ್ಬ ಹಲ್ಲೆ ನಡೆಸಿದುದಲ್ಲದೆ, ಆತನ ವಿರುದ್ಧ ದೂರು ನೀಡಿದ್ದಾನೆ. ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಬಜರಂಗದಳದ ನಾಯಕ ವಿಶಾಲ್ ಚೌಹಾಣ್ ನೀಡಿರುವ ದೂರಿನ ಆಧಾರದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

- Advertisement -

ವಿವಿಧ ಧರ್ಮಗಳ ನಡುವೆ ದ್ವೇಷದ ಭಾವನೆ ಉಂಟು ಮಾಡಿದ್ದಕ್ಕೆ, ಇನ್ನೊಬ್ಬರ ಭಾವನೆಗಳಿಗೆ ನೋವುಂಟು ಮಾಡಿದ್ದು ಸೇರಿದಂತೆ ವಿವಿಧ ಆರೋಪಗಳ ಮೇರೆಗೆ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಎಫ್ ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ, ಪೊಲೀಸರು ನಾಸಿರ್ ನನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ. ಅಗತ್ಯ ಬಿದ್ದಾಗ ವಿಚಾರಣೆಗೆ ಆತನನ್ನು ಕರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.  

ಠಾಕೂರ್ ಒಂದು ಸಮುದಾಯದ ಹೆಸರಾಗಿರುವುದರಿಂದ, ಶೂ ಹಿಂಭಾಗದಲ್ಲಿ ಆ ಸಮುದಾಯದ ಹೆಸರು ಬಳಸಿರುವುದು ಅವರಿಗೆ ಅವಮಾನಿಸಿದಂತೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

- Advertisement -

ಸೋಮವಾರ ನಾಸಿರ್ ನ ಬೀದಿ ಬದಿ ಅಂಗಡಿಗೆ ತೆರಳಿದ್ದ ಚೌಹಾಣ್, ಶೂನಲ್ಲಿ ಠಾಕೂರ್ ಹೆಸರು ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ ಮತ್ತು ಆತನ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾನೆ ಎಂದೂ ಆರೋಪಿಸಲಾಗಿದೆ.

ಈ ಬಗ್ಗೆ ಪರಿಶೀಲಿಸಿರುವ ಪೊಲೀಸರು, ವಿವಿಧ ಧರ್ಮಗಳ ನಡುವೆ ದ್ವೇಷದ ಭಾವನೆ ಉಂಟು ಮಾಡಿದ್ದಾನೆ ಎಂದು ದಾಖಲಿಸಲಾದ ಆರೋಪ ಸುಳ್ಳಾಗಿದ್ದು, ಉಳಿದ ಪ್ರಕರಣಗಳ ಕುರಿತು ತನಿಖೆ ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.



Join Whatsapp