ತಿರುವನಂತಪುರಂ: ಕೇರಳದ ಮಲಪ್ಪುರಂನಿಂದ ಪಾದಯಾತ್ರೆ ಮೂಲಕ 2023ನೇ ವರ್ಷದ ಹಜ್ ಯಾತ್ರೆಗೆ ತೆರಳುತ್ತಿದ್ದ ಶಿಹಾಬ್ ಚೋಟ್ಟೂರ್‌ನ ಅಧಿಕೃತ ಇನ್‌ಸ್ಟಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ಈ ಖಾತೆಗೆ ಸುಮಾರು 26 ಲಕ್ಷದಷ್ಟು ಜನ ಫಾಲೋವರ್ಸ್‌ಗಳಿದ್ದರು. ಶಿಹಾಬ್ ಚೋಟ್ಟೂರ್ ಆಫೀಶಿಯಲ್ ಎಂಬ ಈ ಅಕೌಂಟ್‌ನಿಂದ ಕಳೆದ ರಾತ್ರಿ ಶಿಹಾಬ್‌ಗೆ ಸಂಬಂಧಪಡದ ಫೋಟೋ ಗಳು ಅಪ್‌ಲೋಡ್ ಆಗಿದ್ದವು. ‘ಆನ್‌ಲೈನ್ ಸೂಪ್ಪರ್‌ಕಾರ್’ ಎಂದು ಆತನ ಬಯೋದಲ್ಲೂ ಬದಲಾವಣೆ ಮಾಡಲಾಗಿತ್ತು. ಶಿಹಾಬ್‌ಗೆ ಯಾವುದೇ ಸಂಬಂಧವಿಲ್ಲದ ಸುಮಾರು ಆರರಷ್ಟು ಫೋಟೋ ಗಳು ಅಪ್‌ಲೋಡ್ ಆದಾಗ ಖಾತೆ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ ಈ ಅಕೌಂಟ್ ನಲ್ಲಿದ್ದ ಎಲ್ಲಾ ವೀಡಿಯೋ ಗಳನ್ನು ತೆರವು ಮಾಡಲಾಗಿದ್ದು, ಈಗ ವೈಕಿಂಗ್ಸ್ ಎಂಬ ಸೀರೀಸ್‌ನ ಒಂದು ವೀಡಿಯೋ ಅಪ್‌ಲೋಡ್ ಮಾಡಲಾಗಿದೆ.
ಈ ನಡುವೆ ಶಿಹಾಬ್‌ನ ಬೆಂಬಲಿಗರು ಖಾತೆಯನ್ನು ಮತ್ತೆ ಯಥಾಸ್ಥಿತಿಗೆ ತರುವಂತೆ ಕಮೆಂಟ್ ಮೂಲಕ ಒತ್ತಾಯಿಸಿದ್ದಾರೆ. ವಿದೇಶೀ ಹ್ಯಾಕರ್‌ಗಳು ಖಾತೆಯನ್ನು ಹ್ಯಾಕ್ ಮಾಡಿರಬಹುದೆಂದು ಶಂಕಿಸಲಾಗಿದೆ.
2023ರ ಹಜ್ ತೀರ್ಥ ಯಾತ್ರೆಗೆಂದು ಶಿಹಾಬ್ ಚೋಟ್ಟೂರ್ ಜೂನ್ 2ರಂದು ಮಲಪ್ಪುರಂನಿಂದ ಪಾದಯಾತ್ರೆ ಆರಂಭಿಸಿದ್ದರು. ಸುಮಾರು 8640 ಕಿಲೋಮೀಟರ್ ದೂರವನ್ನು 250 ದಿನಗಳಲ್ಲಿ ಪಾದಯಾತ್ರೆ ಮೂಲಕ ಕ್ರಮಿಸುವ ಯೋಜನೆ ಹಾಕಿಕೊಂಡಿದ್ದು, ಸದ್ಯ ಶಿಹಾಬ್ ರಾಜಸ್ಥಾನದಲ್ಲಿದ್ದಾರೆ.