ಲಖನೌ: ರಾಷ್ಟ್ರಪತಿ ಚುನಾವಣಾ ಕಣ ಕಾವೇರುತ್ತಿರುವ ಮಧ್ಯೆ ಪ್ರಗತಿಶೀಲ ಸಮಾಜವಾದಿ ಪಕ್ಷ- ಲೋಹಿಯಾ (PSP-L) ಮುಖ್ಯಸ್ಥ ಮತ್ತು ಪ್ರಸಕ್ತ ಸಮಾಜವಾದಿ ಪಕ್ಷದ (ಎಸ್ಪಿ) ಶಾಸಕರಾಗಿರುವ ಶಿವಪಾಲ್ ಯಾದವ್, NDA ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕುವುದಾಗಿ ಶನಿವಾರ ಪ್ರಕಟಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನನ್ನ ಬೆಂಬಲ ಕೋರಿದ್ದು, ಈ ಹಿನ್ನೆಲೆಯಲ್ಲಿ NDA ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಲು ನಿರ್ಧರಿಸಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಎಸ್ಪಿಯ ಮಿತ್ರ ಪಕ್ಷವಾದ ಸುಹೇಲ್’ದೇವ್ ಭಾರತೀಯ ಸಮಾಜ ಪಕ್ಷದ (SBSP) ಮುಖ್ಯಸ್ಥ ಓಮ್ ಪ್ರಕಾಶ್ ರಾಜ್’ಭರ್ ಮತ್ತು ಶಿವಪಾಲ್ ಎಂಬಿಬ್ಬರು, ಮುಖ್ಯಮಂತ್ರಿ ಆದಿತ್ಯನಾಥ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಸದ್ಯ ಈ ಬೆಳವಣಿಗೆ ಪ್ರತಿಪಕ್ಷದ ಪಾಳೆಯದ ಚಿಂತೆಗೆ ಕಾರಣವಾಗಿದೆ.
ಅಲ್ಲದೆ ಈ ಕಾರ್ಯಕ್ರಮದಲ್ಲಿ ಜನಸತ್ತಾದಳ ಲೋಕತಾಂತ್ರಿಕ ಪಕ್ಷದ ಮುಖ್ಯಸ್ಥ ರಘುರಾಮ್ ಪ್ರತಾಪ್ ಸಿಂಗ್, ರಾಜಾ ಭಯ್ಯಾ, ಬಿಎಸ್ಪಿ ಶಾಸಕ ಉಮಾ ಶಂಕರ್ ಸಿಂಗ್ ಎಂಬವರು ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.
ಜುಲೈ 12 ರಂದು ಅಧ್ಯಕ್ಷೀಯ ಚುನಾವಣೆಯ ಕುರಿತು SBSP ಪಕ್ಷವು ತನ್ನ ಅಧಿಕೃತ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಓಮ್ ಪ್ರಕಾಶ್ ರಾಜ್’ಭರ್ ತಿಳಿಸಿದ್ದಾರೆ.