ಬಾಗಲಕೋಟೆ: ನಗರದ ಸೋನಾರ ಬಡಾವಣೆಯಲ್ಲಿ ಅನುಮತಿಯಿಲ್ಲದೆ ಸಂಘಪರಿವಾರ ಪ್ರತಿಷ್ಠಾಪನೆ ಮಾಡಿರುವ ಶಿವಾಜಿ ಪುತ್ಥಳಿಯನ್ನು ಜೆಸಿಬಿ ಮೂಲಕ ನಗರಸಭೆ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ.
ಡಿಸಿ ಆದೇಶದ ಮೇರೆಗೆ ಪ್ರತಿಮೆ ಸ್ಥಳಾಂತರಿಸಲಾಗಿದ್ದು, ಟಾಟಾ ಏಸ್ ವಾಹನದಲ್ಲಿ ಶಿವಾಜಿ ಪ್ರತಿಮೆಯನ್ನು ನಗರಸಭೆ ಸಿಬ್ಬಂದಿ ಸಾಗಿಸಿದ್ದಾರೆ. ಈ ವೇಳೆ ವಿರೋಧಿಸಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 18ರ ಮಧ್ಯರಾತ್ರಿ 12ರವರೆಗೆ ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬಾಗಲಕೋಟೆ ಡಿಸಿ ಕೆ.ಎಂ.ಜಾನಕಿ ಆದೇಶ ಹೊರಡಿಸಿದ್ದಾರೆ.
ಪುತ್ಥಳಿ ತೆರವುಗೊಳಿಸದಂತೆ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರ ಪಟ್ಟು ಹಿಡಿದಿದ್ದು, ಪ್ರತಿಭಟನೆ ನಡೆಸಿದ್ದರು. ಶಿವಾಜಿ ಪುತ್ಥಳಿ ಇರುವ ಸ್ಥಳದಲ್ಲೇ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು, 3 DAR, 1 KSRP ತುಕಡಿ ಸೇರಿ 100ಕ್ಕೂ ಹೆಚ್ಚು ನಿಯೋಜನೆ ಮಾಡಲಾಗಿದೆ. ಜತೆಗೆ ಪುತ್ಥಳಿ ಇರುವ ಸ್ಥಳದಲ್ಲಿ ಸಿಸಿಕ್ಯಾಮರಾ ಅಳವಡಿಸಲಾಗಿದೆ.
15 ಕ್ಕೂ ಅಧಿಕ ಜನರು ವಶಕ್ಕೆ
ಪ್ರತಿಭಟನಾನಿರತರನ್ನು ಹತೋಟಿಗೆ ತರಲು ಎಸ್ಪಿ, ಪೊಲೀಸರು ಯತ್ನಿಸಿದ್ದು, ಎಸ್ಪಿ ಜಯಪ್ರಕಾಶ್ ಜತೆ ಮಾತಿನಚಕಮಕಿ ಉಂಟಾಗಿದೆ. ಈ ವೇಳೆ 15 ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಾಗಲಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.