ಶಿವಾಜಿ‌ ಮೂರ್ತಿ ವಿವಾದ : ಬಾಗಲಕೋಟೆ ಬಂದ್‌ಗೆ ಕರೆ ನೀಡಿದ ಬಿಜೆಪಿ

Prasthutha|

ಬಾಗಲಕೋಟೆ: ಸುಮಾರು ನಾಲ್ಕು ದಿನಗಳಿಂದ ಬಾಗಲಕೋಟೆ ನಗರದಲ್ಲಿ ಶಿವಾಜಿ‌ ಮೂರ್ತಿ ಗಲಾಟೆ ಜೋರಾಗಿದೆ. ಜಿಲ್ಲಾಡಳಿತ ಮೂರ್ತಿ ತೆರವುಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ಬಂದ್ ಗೆ ಕರೆ ನೀಡಿದೆ.

- Advertisement -

ಆ.13 ರಂದು ಬೆಳ್ಳಂಬೆಳಿಗ್ಗೆ ಬಾಗಲಕೋಟೆ ನಗರದ ಹೊರವಲಯದ ಕಾಂಚನಾ ಪಾರ್ಕ್ ಬಳಿ ಜಾಗದಲ್ಲಿ ಸುಮಾರು 18 ಅಡಿ ಎತ್ತರದ ಶಿವಾಜಿ‌ ಮೂರ್ತಿಯನ್ನು ಅಕ್ರಮವಾಗಿ ಪ್ರತಿಷ್ಠಾಪನೆ ಮಾಡಲಾಗಿತ್ತು.

ಶಿವಾಜಿ ಪ್ರತಿಮೆ ಇರಿಸಿದ ಜಾಗ ಸದ್ಯ ಬಾಗಲಕೋಟೆ ನಗರಸಭೆಯ ಆಧೀನದಲ್ಲಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಎಂ ಜಾನಕಿ ಶಿವಾಜಿ ಮೂರ್ತಿ ತೆರವಿಗೆ ಆದೇಶ ನೀಡಿದ್ದಲ್ಲದೇ, ನಗರದಲ್ಲಿ ಸೆಕ್ಷನ್ 144 ಕಲಂ ಜಾರಿಮಾಡಿ ನಿಷೇಧಾಜ್ಞೆ ಜಾರಿ ಮಾಡಿದ್ದರು. ಆದೇಶದ ಅನ್ವಯ ಸಂಜೆ ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದ ಪೊಲೀಸ್ ಸಿಬ್ಬಂದಿ ಮೂರ್ತಿ ಇರುವ ಕಾಂಚನಾ ಪಾರ್ಕ್ ರಸ್ತೆಯನ್ನು ಬಂದ್ ಮಾಡಿ ಸರಿಯಾಗಿ ರಾತ್ರಿ 10 ಗಂಟೆಗೆ ನಗರಸಭಾ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಮೂರ್ತಿಯನ್ನ ತೆರವು ಗೊಳಿಸಿದ್ದರು.

- Advertisement -

 ಮೂರ್ತಿ ತೆರವುಗೊಳಿಸುವುದನ್ನು ವಿರೋಧಿಸಿ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಆಗಸ್ಟ್‌ 14 ರಂದು ಬೆಳಗ್ಗೆ ನಗರಸಭೆಗೆ ತೆರಳಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ವೇಳೆ ಸ್ಥಳದಲ್ಲಿದ್ದ 15 ಬಿಜೆಪಿ ಮುಖಂಡರನ್ನು ಹಾಗೂ ಕೆಲ ಸಂಘಪರಿವಾರದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದರು. ಇದರಿಂದ ಆಕ್ರೋಶಿತರಾಗಿರುವ ಬಿಜೆಪಿಗರು ಗುರುವಾರ ಬಾಗಲಕೋಟೆಯ ಶಿವಾನಂದ್ ಜಿನ್ ನಲ್ಲಿ ಸಭೆ ಸೇರಿ, ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಇಂದು (ಶುಕ್ರವಾರ) ಬಾಗಲಕೋಟೆ ನಗರವನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ತೆರವುಗೊಳಿಸಿದ ಮೂರ್ತಿಯನ್ನು ಅದೇ ಜಾಗದಲ್ಲಿ ಮರು ಪ್ರತಿಷ್ಠಾಪಿಸಬೇಕು. ಇಲ್ಲದೇ ಇದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಮೂರ್ತಿ ಮರು ಪ್ರತಿಷ್ಠಾಪಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಘಪರಿವಾರದ ಕಾರ್ಯಕರ್ತರು ಮನವಿಯನ್ನೂ ಮಾಡಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಮಾಜಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಾಗಲಕೋಟೆ ಶಿವಾನಂದ್ ಜಿನ್‌ನಲ್ಲಿ ಸಭೆ ಸೇರಲಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮುಂದಿನ ಹೋರಾಟದ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ.

ಸದ್ಯ ನಾಲ್ಕು ದಿನಗಳಿಂದ ಶಿವಾಜಿ ಮೂರ್ತಿ ವಿಚಾರವಾಗಿ ಬಾಗಲಕೋಟೆಯಲ್ಲಿ ಬಿಗುವಿನ ವಾತವರಣ ನಿರ್ಮಾವಾಗಿದೆ.



Join Whatsapp