ಮುಂಬೈ : ಶಿವಸೇನೆ ಮುಖಂಡ, ಶಾಸಕ ಪ್ರತಾಪ್ ಸರ್ನಾಯಕ್ ಅವರ ಕಚೇರಿ ಮತ್ತು ಮನೆ ಮೇಲೆ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಅಲ್ಲದೆ, ಶಾಸಕ ಪ್ರತಾಪ್ ರ ಪುತ್ರ ವಿಹಾಂಗ್ ಸರ್ನಾಯಕ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಯಾವ ಕಾರಣಕ್ಕಾಗಿ ದಾಳಿ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆದಿದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳ ಕಾರ್ಯಕರ್ತರ ರೀತಿಯಲ್ಲೇ ವರ್ತಿಸುವ, ಮಾತನಾಡುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಶಾಸಕ ಪ್ರತಾಪ್ ಸರ್ನಾಯಕ್ ಟೀಕಿಸಿದ್ದರು. ಮುಂಬೈಯನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದ ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಪ್ರತಾಪ್ ಸರ್ನಾಯಕ್ ಒತ್ತಾಯಿಸಿದ್ದರು.
“ಸಂಸದ ಸಂಜಯ್ ರಾವತ್ ಅವರು ಬಹಳ ಮೃದುವಾದ ರೀತಿ ಕಂಗನಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಆಕೆ ಇಲ್ಲಿಗೆ ಬಂದರೆ ನಮ್ಮ ಧೈರ್ಯಶಾಲಿ ಮಹಿಳೆಯರು ಆಕೆಗೆ ಬಾರಿಸದೆ ಇರುವುದಿಲ್ಲ. ಉದ್ಯಮಿಗಳು ಮತ್ತು ಸಿನೆಮಾ ತಾರೆಯರನ್ನು ಸೃಷ್ಟಿಸುವ ನಗರವಾದ ಮುಂಬೈಯನ್ನು ಪಿಒಕೆಗೆ ಹೋಲಿಸಿದ್ದಕ್ಕೆ ಆಕೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’’ ಎಂದು ಅವರು ಹೇಳಿದ್ದರು.
ಬಿಜೆಪಿ ಬೆಂಬಲಿಗ ಪತ್ರಕರ್ತ, ‘ರಿಪಬ್ಲಿಕ್ ಟಿವಿ’ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಪ್ರತಾಪ್ ಸರ್ನಾಯಕ್ ಹಕ್ಕುಚ್ಯುತಿ ಮಂಡಿಸಿದ್ದರು. ಅಲ್ಲದೆ, ಇಂಟಿರಿಯರ್ ಡೆಕೋರೇಟರ್ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಚೋದನೆ ಪ್ರಕರಣದ ಮರುತನಿಖೆಗೂ ಅವರು ಒತ್ತಾಯಿಸಿದ್ದರು.
ಬಿಜೆಪಿ ವಿರುದ್ಧ ಪ್ರತಿರೋಧಿಸುವ ಮುಖಂಡರ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತದೆ ಎಂಬ ಆರೋಪಗಳ ನಡುವೆ, ಇಡಿ ಅಧಿಕಾರಿಗಳ ಈ ದಾಳಿ ಮತ್ತೊಂದು ಸುತ್ತಿನ ಅನುಮಾನಗಳನ್ನು ಹುಟ್ಟುಹಾಕಿದೆ.
ತಮ್ಮ ಪ್ರತಿರೋಧಿಗಳನ್ನು ಮೌನವಾಗಿಸಲು ಕೇಂದ್ರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿರುವ ಶಿವಸೇನಾ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ಆದರೆ ನಮ್ಮ ಹೋರಾಟ ಇನ್ನೂ ಪ್ರಬಲವಾಗುತ್ತದೆ ಎಂದಿದ್ದಾರೆ.