►ಔತಣಕೂಟಕ್ಕೆಂದು ಆಹ್ವಾನಿಸಿ ಯಾವುದೇ ಮಾಹಿತಿ ನೀಡದೆ ಗುಜರಾತ್ ಗೆ ಕರೆದೊಯ್ಯಲು ಯತ್ನಿಸಿದ್ದರು
ಮುಂಬೈ: ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ಅವರ ಬೆಂಬಲಿಗರು ತಮ್ಮನ್ನು ವಂಚಿಸಿ ಕಾರಿನಲ್ಲಿ ಗುಜರಾತ್ ಗೆ ಕರೆದೊಯ್ಯಲು ಪ್ರಯತ್ನಿಸಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬಂದೆ ಎಂದು ಉಸ್ಮಾನಾಬಾದ್ ನ ಶಿವಸೇನೆಯ ಶಾಸಕ ಕೈಲಾಸ್ ಪಾಟೀಲ್ ಹೇಳಿದ್ದಾರೆ.
ಪಾಟೀಲ್ ಅವರು ನೆರೆಯ ರಾಜ್ಯಕ್ಕೆ ಹೋಗುವ ಮಾರ್ಗಮಧ್ಯೆ ತಪ್ಪಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
“ಬಾಂದ್ರಾ (ಪೂರ್ವ) ನಲ್ಲಿರುವ ಶಿವಸೇನಾ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆ ಅವರ ನಿವಾಸವಾದ ಮುಂಬೈನ ಮಾತೋಶ್ರೀಗೆ ಮರಳಿದ ಪಾಟೀಲ್, ಔತಣಕೂಟಕ್ಕೆಂದು ಆಹ್ವಾನಿಸಿ ಯಾವುದೇ ಮಾಹಿತಿ ನೀಡದೆ ಗುಜರಾತ್ ಗೆ ಕರೆದೊಯ್ಯಲು ಯತ್ನಿಸುವಾಗ ದಾರಿ ಮಧ್ಯೆ ತಪ್ಪಿಸಿಕೊಂಡಿದ್ದಾರೆ.
ಪಾಟೀಲ್ ಗುಜರಾತ್-ಮಹಾರಾಷ್ಟ್ರ ಗಡಿಯ ಬಳಿ ಕಾರಿನಿಂದ ಇಳಿದು ರಾತ್ರಿ ಕೆಲವು ಕಿಲೋಮೀಟರ್ ದೂರದವರೆಗೆ ಮುಂಬೈ ಕಡೆಗೆ ನಡೆದರು. ಅವರು ದ್ವಿಚಕ್ರ ವಾಹನದಲ್ಲಿ ಮತ್ತು ನಂತರ ಟ್ರಕ್ ನಲ್ಲಿ ಒಬ್ಬ ವ್ಯಕ್ತಿಯಿಂದ ಲಿಫ್ಟ್ ಪಡೆದು ಮಂಗಳವಾರ ಮುಂಜಾನೆ ಮುಂಬೈಗೆ ತಲುಪಿದರು ಎನ್ನಲಾಗಿದೆ.
ಪಾಟೀಲ್ ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಶಿವಸೇನೆ ಟಿಕೆಟ್ ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪಕ್ಷದ ನಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು, ಪಾಟೀಲ್ ಅವರಿಗೆ ಪಕ್ಷದಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.