ಹಾಸನ: ಸಕಲೇಶಪುರ ತಾಲೂಕು ದೋಣಿಗಾಲ್ ಬಳಿ ಭೂ ಕುಸಿತದಿಂದಾಗಿ ಕಳೆದ ಜು. 16 ರಿಂದ ಸಂಪೂರ್ಣ ಬಂದ್ ಆಗಿದ್ದ ಶಿರಾಡಿಘಾಟ್ ಸಂಚಾರ ಇಂದು ಮಧ್ಯಾಹ್ನದಿಂದ ಮತ್ತೆ ಆರಂಭವಾಗಿದೆ.
ಭಾರೀ ಮಳೆಯಿಂದಾಗಿ ದೋಣಿಗಾಲ್ ಬಳಿ ಹಲವು ಬಾರಿ ಭೂ ಕುಸಿತ ಉಂಟಾಗಿದ್ದರಿಂದ ಜು.16 ರಿಂದ ಎಲ್ಲಾ ರೀತಿಯ ವಾಹನ ಸಂಚಾರವನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಲಘುವಾಹನ, ಕಾರು, ಬಸ್ ಸೇರಿದಂತೆ 6 ಚಕ್ರದ ವಾಹನ ಓಡಾಟಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅನುಮತಿ ನೀಡಿದ್ದಾರೆ. ಭೂ ಕುಸಿದ ಕೆಲವೇ ದಿನಗಳಲ್ಲಿ ವಾಹನ ಸಂಚಾರ ಮರು ಆರಂಭವಾಗಿರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದೀಗ ಚಾರ್ಮಾಡಿ ಮತ್ತು ಸಂಪಾಜೆ ಮಾರ್ಗಗಳಲ್ಲಿ ಸಂಚರಿಸಲು ವಾಹನ ಸವಾರರಿಗೆ ತೀವ್ರ ತೊಂದರೆ ಆದ ಹಿನ್ನೆಲೆಯಲ್ಲಿ ಶಿರಾಡಿ ಮಾರ್ಗದಲ್ಲೇ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ.
ಸಕಲೇಶಪುರ ಭಾಗದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಕುಸಿದಿದ್ದ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಆದರೆ 6 ಚಕ್ರಕ್ಕಿಂತ ಮೇಲ್ಪಟ್ಟ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಕಲೇಶಪುರ ತಹಸೀಲ್ದಾರ್ ಜಯಕುಮಾರ್, ದೋಣಿಗಾಲ್ ಬಳಿಯ ಹೆದ್ದಾರಿಯಲ್ಲಿ ಕುಸಿದಿದ್ದ ರಸ್ತೆಯನ್ನು ಗುತ್ತಿಗೆದಾರರು ಶೀಘ್ರಗತಿಯಲ್ಲಿ ದುರಸ್ತಿ ಪಡಿಸಿ, ಎಚ್‌ಹೆಚ್‌ಎಐ ಅಧಿಕಾರಿ ಜಿಲ್ಲಾಧಿಕಾರಿಗೆ ರಿಪೋರ್ಟ್ ನೀಡಿದ್ದರು. ಅದನ್ನು ಪರಿಶೀಲಿಸಿ ಜಿಲ್ಲಾಧಿಕಾರಿ, 6 ಚಕ್ರದವರೆಗಿನ ಎಲ್ಲಾ ವಾಹನ ಓಡಾಡಲು ಅನುಮತಿ ಕೊಟ್ಟಿದ್ದಾರೆ. ಇದರಲ್ಲಿ ಕಮರ್ಷಿಯಲ್ ವಾಹನಗಳೂ ಓಡಾಡಬಹುದು ಎಂದೂ ಹೇಳಿದ್ದಾರೆ.
ಎರಡೂ ಕಡೆ ಓಡಾಡುವ ಅವಕಾಶವಿದ್ದರೂ, ರಕ್ಷೆ ಸುರಕ್ಷತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಒಂದೇ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಇದನ್ನು ಮಾನಿಟರ್ ಮಾಡಲು ದೋಣಿಗಾಲ್ ಮತ್ತು ಮಾರನಹಳ್ಳಿ ಬಳಿ ಎರಡು ಚೆಕ್‌ಪೋಸ್ಟ್ ತೆರೆಯಲಾಗಿದೆ. ಚೆಕ್‌ಪೋಸ್ಟ್ ಪೊಲೀಸ್ ಇಲಾಖೆಯ ಸುಪರ್ದಿಯಲ್ಲಿ ಇರಲಿದೆ. ಬೇರೆ ತರಹದ ಬೃಹತ್ ವಾಹನ ಓಡಾಡದ ಹಾಗೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಶಿರಾಡಿಘಾಟ್ ರಸ್ತೆಯಲ್ಲಿ 6 ಚಕ್ರ ಹಾಗೂ ಲಘು ವಾಹನಗಳ (20ಟನ್ ತೂಕ) ಓಡಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಈ ವಾಹನಗಳು ಹಗಲು ವೇಳೆ ಓಡಾಡಬೇಕು. ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆ ವರೆಗೆ ತುರ್ತು ವಾಹನ ಬಿಟ್ಟು ಇತರ ವಾಹನಗಳಿಗೆ ಅವಕಾಶ ಇರುವುದಿಲ್ಲ. ಶಿರಾಡಿಘಾಟ್ ರಸ್ತೆಯಲ್ಲಿ 2 ಕಡೆ ಪೊಲೀಸ್ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಭಾರೀ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ದೋಣಿಗಾಲ್ ಬಳಿ ಏಕಮುಖವಾಗಿ ಸಂಚರಿಸಬೇಕು. ಈ ಬಗ್ಗೆ ದಕ್ಷಿಣ ಕನ್ನಡ ಹಾಗೂ ಉಪ್ಪಿನಂಗಡಿ ಪೊಲೀಸರೊಂದಿಗೂ ಚರ್ಚಿಸಲಾಗಿದೆ. ಈ ಮಾರ್ಗದಲ್ಲಿ ಭಾರಿ ವಾಹನ ಬಿಡದಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ಪತ್ರ ಬರೆದಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.