ಶಿರಾಡಿಘಾಟ್ ರಸ್ತೆ ಲೋಪ ಸರಿಪಡಿಸಲು ಸೂಚನೆ; ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣ: ಸಚಿವ ಸಿ.ಸಿ.ಪಾಟೀಲ್ ಭರವಸೆ

Prasthutha|

ಸಕಲೇಶಪುರ: ಶಿರಾಡಿಘಾಟ್ ರಸ್ತೆ ರಾಜ್ಯದ ಪ್ರಮುಖ ಮಾರ್ಗವಾಗಿದ್ದು, ಇದನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

- Advertisement -

ಜೋರು ಮಳೆಯಿಂದ ಕುಸಿದಿರುವ ತಾಲೂಕಿನ ದೋಣಿಗಲ್ ಪ್ರದೇಶಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನಾಲ್ಕು ಪಥದ ಕಾಮಗಾರಿ 2017 ರಲ್ಲೇ ಪ್ರಾರಂಭವಾಗಿದೆ. ಗುತ್ತಿಗೆದಾರರ ಸಮಸ್ಯೆ, ಕೋವಿಡ್, ಮಳೆ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಗುಣಮಟ್ಟ ಪರೀಕ್ಷಿಸಿ ವೇಗ ಹೆಚ್ಚಿಸಲು ಇಂದು ಸ್ಥಳ ಪರಿಶೀಲನೆ ಮಾಡಿದ್ದೇನೆ. ಕೆಲ ಸ್ಥಳಗಳಲ್ಲಿ ಕಳಪೆ ಕಾಮಗಾರಿ ನಡೆದಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಳೆ ನಿಂತ ಕೂಡಲೇ ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ದೋಣಿಗಲ್ ಬಳಿ ಬಹಳ ಆಳದಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ವೈಜ್ಞಾನಿಕವಾಗಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಚಾರ್ಮಾಡಿ ಘಾಟ್ ಕೂಡ ಕುಸಿಯುತ್ತಿದೆ. ಎಲ್ಲಾ ಸಾಮಾಗ್ರಿಗಳನ್ನು ಸ್ಥಳಕ್ಕೆ ತರಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಅವರು ಕಾಮಗಾರಿ ಆರಂಭಿಸಿದ ನಂತರ ಏಕಪಥ ಸಂಚಾರ ವ್ಯವಸ್ಥೆ ಮಾಡಲು ಯೋಚಿಸುತ್ತೇವೆ ಎಂದು ಹೇಳಿದರು.

- Advertisement -

ನಾವು ಅಂದುಕೊಂಡ ಮಟ್ಟಿಗೆ ಕಾಮಗಾರಿ ವೇಗವಾಗಿ ನಡೆದಿಲ್ಲ. ವಿಧಾನಸೌಧದಲ್ಲಿ ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಖುದ್ದು ವೀಕ್ಷಿಸಲು ನಾನೇ ಬಂದಿದ್ದೇನೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸುತ್ತೇವೆ. ಸ್ಥಳದಲ್ಲಿ ಒಬ್ಬ ಅಧಿಕಾರಿಯನ್ನು ಇಟ್ಟು, ಸಾರ್ವಜನಿಕರ ಕುಂದು ಕೊರತೆ ಕೇಳಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಕಾಮಗಾರಿಗೆ ವೇಗ ನೀಡಲು ನಾವು ತಯಾರಾಗಿದ್ದೇವೆ, 2023 ಡಿಸೆಂಬರ್ ವೇಳೆಗೆ ಸಂಪೂರ್ಣ ಕಾಮಗಾರಿ ಮುಗಿಸಲು ಸೂಚಿಸಿದ್ದೇವೆ ಆದರೆ ಗುತ್ತಿಗೆದಾರರು 2024 ಡಿಸೆಂಬರ್ ವರೆಗೆ ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರು, ಆಲೂರು ಬಳಿಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಕಲೇಶಪುರಕ್ಕೆ ತೆರಳುವ ಮಾರ್ಗಮಧ್ಯೆ ಕಾಮಗಾರಿ ವೀಕ್ಷಿಸಿದ ಸಚಿವರು, ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಕಳಪೆ ಹಾಗೂ ಅವೈಜ್ಞಾನಿಕ ಜೊತೆಗೆ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಬೈರಾಪುರ ರಸ್ತೆ ಹಾಗೂ ತಡೆಗೋಡೆ ಕಾಮಗಾರಿ ವೀಕ್ಷಣೆ ಮಾಡಿ ಜನರ ಅಹವಾಲು ಸ್ವೀಕರಿಸಿದ ಸಚಿವರು, ಸರಿಯಾದ ರೀತಿಯಲ್ಲಿ ಕೆಲಸ ಮಾಡದಿದ್ದಲ್ಲಿ ಎಲ್ಲಾ ತಪ್ಪಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ. ಜನರ ತಾಳ್ಮೆ ಪರೀಕ್ಷೆ ಮಾಡದೆ ಶೀಘ್ರಗತಿಯಲ್ಲಿ ಕೆಲಸ ಮುಗಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಆರ್.ಗಿರೀಶ್, ಕಾಮಗಾರಿ ಸಂಬಂಧ ಈಗಾಗಲೇ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿದರೂ ಕೂಡ, ಅವರಿಂದ ಸ್ಪಂದನೆ ಸಿಗುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸಲು ಬೇಕಾಗುವ ಸಹಕಾರವನ್ನು ಜಿಲ್ಲಾಡಳಿತ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ. ಕರವೇ ಮುಖಂಡ ರಘುಪಾಳ್ಯ, ನಟರಾಜ್, ಬೈರಾಪುರ ಗ್ರಾಪಂ ಅಧ್ಯಕ್ಷ ರವಿಕುಮಾರ್, ಪಪಂ ಅಧ್ಯಕ್ಷ ನಿಂಗರಾಜ್ ಇತರರು ಉಪಸ್ಥಿತರಿದ್ದರು.



Join Whatsapp