ಶಿವಮೊಗ್ಗ: ಅನುಮತಿಯಿಲ್ಲದೆ ಬಜರಂಗ ದಳದ ಕಾರ್ಯಕರ್ತ ಹರ್ಷ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾಡಳಿತದ ಅನುಮತಿ ಇಲ್ಲದೇ ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಲಾಗಿದ್ದು, ದಾರಿಯುದ್ದಕ್ಕೂ ಸಿಕ್ಕ ಮನೆಗಳು, ವಾಣಿಜ್ಯ ಮಳಿಗೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.
ಪಾರ್ಥಿವ ಶರೀರದ ಮೆರವಣಿಗೆ ಸೋಮವಾರ ಸೀಗೆಹಟ್ಟಿಯಿಂದ ಕುಂಬಾರಬೀದಿ, ಸಿದ್ದಯ್ಯರಸ್ತೆ, ಗಾಂಧಿ ಬಜಾರ್, ಬಿ.ಎಚ್. ರಸ್ತೆಯ ಮೂಲಕ ವಿದ್ಯಾನಗರದ ರೋಟರಿ ಚಿತಾಗಾರ ತನಕ ನಡೆದಿತ್ತು.
ಮೆರವಣಿಗೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್ನ ಹಲವು ಮುಖಂಡರು ಭಾಗವಹಿಸಿದ್ದರು. ಈ ಸಮಯದಲ್ಲಿ ಮನೆಗಳು, ವಾಣಿಜ್ಯ ಮಳಿಗೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಬೈಕ್ಗಳು, ಆಟೊರಿಕ್ಷಾಗಳಿಗೆ ಬೆಂಕಿ ಹಚ್ಚಲಾಗಿತ್ತು. ಕಾರುಗಳನ್ನು ಜಖಂಗೊಳಿಸಲಾಗಿತ್ತು.
ಗಲಭೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದರು. ಈ ಸಂಬಂಧ ದೊಡ್ಡಪೇಟೆ, ಕೋಟೆ ಒಳಗೊಂಡಂತೆ ವಿವಿಧ ಠಾಣೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ.