ಶಿವಮೊಗ್ಗ: ಸಿಮೆಂಟ್ ಜಿಂಕೆ ಮುರಿದು ಬಿದ್ದು ಸಾವನ್ನಪ್ಪಿದ್ದ ಮಗುವಿನ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಮಗಳ ಸಾವಿನಲ್ಲೂ ತಂದೆ ಸಾರ್ಥಕತೆ ಮೆರೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತವಾಗಿದೆ. 6 ವರ್ಷದ ಮಗಳ ಕಣ್ಣುಗಳನ್ನು ದಾನ ಮಾಡಿರುವ ತಂದೆ ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ಹರೀಶ್ ಎಂಬವರಾಗಿದ್ದಾರೆ.
ಘಟನೆ ಬಗ್ಗೆ ಭಾವುಕರಾಗಿ ಪ್ರತಿಕ್ರಿಯೆ ನೀಡಿರುವ ಹರೀಶ್, ಇಬ್ಬರು ಮಕ್ಕಳನ್ನು ಪಾರ್ಕ್ಗೆ ಕರೆದುಕೊಂಡು ಹೋಗಿದ್ದೆ, ಈ ವೇಳೆ ನಾನು ಚಿಕ್ಕ ಮಗುವನ್ನು ನೋಡಿಕೊಳ್ಳುತ್ತಿದ್ದ ವೇಳೆ ದೊಡ್ಡ ಮಗಳು ಕಣ್ತಪ್ಪಿಸಿ ಬೊಂಬೆ ಮೇಲೆ ಹತ್ತಲು ಹೋಗಿದ್ದಳು ಅನ್ಸುತ್ತೆ, ಅಲ್ಲಿ ಏನಾಯ್ತೋ ಗೊತ್ತಾಗಿಲ್ಲ. ಕ್ಷಣ ಮಾತ್ರದಲ್ಲಿ ಸಿಮೆಂಟ್ ಬೊಂಬೆ ಮಗು ಮೇಲೆ ಬಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸೋ ಪ್ರಯತ್ನ ಮಾಡಿದ್ದೆವು. ಆದರೆ ಆ ವೇಳೆ ಮಗು ಸಾವನ್ನಪ್ಪಿದೆ ಅಂತ ವೈದ್ಯರು ಹೇಳಿದ್ದರು. ಮಗು ಸಾವನ್ನಪ್ಪಿದೆ ಕಣ್ಣುಗಳನ್ನು ಆದ್ರು ದಾನ ಮಾಡಿ ಬೇರೋಬ್ಬರ ಬಾಳಿಗೆ ಬೆಳಕು ತರಲು ನಿರ್ಧಾರ ಮಾಡಿ ಕಣ್ಣು ದಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಪಾರ್ಕ್ನಲ್ಲಿ ಕಳಪೆ ಕಾಮಗಾರಿ ನಡೆದಿದೆ, ಬೊಂಬೆ ಮಕ್ಕಳು ಮುಟ್ಟಿಕೊಂಡರೆ ಮುರಿದು ಬೀಳುತ್ತಿದೆ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ ಎಂತಹ ಗುಣಮಟ್ಟದ ಕೆಲಸ ನಡೆದಿದೆ ಎಂದು. ಈಗ ನನ್ನ ಮಗು ಸಾವನ್ನಪ್ಪಿದೆ, ಮತ್ತೊಂದು ಮಗುವಿಗೆ ಈ ರೀತಿ ಆಗೋದು ಬೇಡ. ದಯಮಾಡಿ ಪಾರ್ಕ್ ನಲ್ಲಿರುವ ವಸ್ತುಗಳನ್ನು ತೆರವು ಮಾಡಿ, ಅಕ್ರಮ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಇದೇ ವೇಳೆ ಅವರು ಮನವಿ ಮಾಡಿದ್ದಾರೆ.