ಗೃಹ ಸಚಿವರ ತವರೂರಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: ಇಬ್ಬರ ಬಂಧನ

Prasthutha|

ಶಿವಮೊಗ್ಗ: ಗೃಹ ಸಚಿವರ ತವರೂರು ಆರಗದಲ್ಲಿ ಸೋಮವಾರ ರಾತ್ರಿ ದಲಿತ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಆದರ್ಶ ಮತ್ತು ಸಂಪತ್ ಬಂಧಿತ ಆರೋಪಿಗಳು. ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಮಹಿಳೆಯೊಬ್ಬರು ತಮ್ಮ ಪತಿಯನ್ನು ತೀರ್ಥಹಳ್ಳಿ ಪಟ್ಟಣಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ನಂತರ ರಾತ್ರಿ 9ರ ಸುಮಾರಿಗೆ ತಮ್ಮ ಗ್ರಾಮಕ್ಕೆ ವಾಪಸಾದ ಸಂದರ್ಭ ದೇವರಗುಡಿ ಗ್ರಾಮದ ನಿವಾಸಿಗಳಾದ ಸಂಪತ್, ಆದರ್ಶ ಮತ್ತು ಇತರ ಇಬ್ಬರು ಏಕಾಏಕಿ ಇವರನ್ನು ಅಡ್ಡಗಟ್ಟಿ ಅನಾರೋಗ್ಯ ಪೀಡಿತ ಪತಿಗೆ ಹಲ್ಲೆ ನಡೆಸಿ ಸಮೀಪವೇ ಇರುವ ರಬ್ಬರ್ ಪ್ಲಾಂಟೇಷನ್ ಗೆ ಎಳೆದೊಯ್ದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ದೂರಿನ ಸಾರಾಂಶ ಹೀಗಿದೆ.

ನಾನು ಮತ್ತು ನನ್ನ ಗಂಡ ಆರಗಾ ಗ್ರಾಮದ ಹರಿಜನ ಕಾಲೋನಿಯಲ್ಲಿ  ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದೇವೆ. ನಾನು ಹೊಸನಗರ ತಾಲೂಕು ತೋಟದ ಮನೆ ಕೆಸಿನಒಡ್ಡು ಗ್ರಾಮದ  ನಿವಾಸಿಯಾಗಿದ್ದು ನಾಲ್ಕು ವರ್ಷದ ಹಿಂದೆ ದೇವೇಂದ್ರ ಅವರನ್ನು ವಿವಾಹವಾಗಿರುತ್ತೇನೆ.

 ನಮಗೆ ಆರೋಗ್ಯ ಸಮಸ್ಯೆ ಇದ್ದು ನಮ್ಮಿಬ್ಬರಿಗೆ ಈವರೆಗೆ ಮಕ್ಕಳಾಗಿಲ್ಲ. ನನ್ನ ಅನಾರೋಗ್ಯದ ಬಗ್ಗೆ ಆರಗದಲ್ಲಿರುವ ಸರ್ಕಾರಿ ವೈದ್ಯರಾದ ಡಾಕ್ಟರ್ ತೇಜಸ್ವಿಯವರು ಚಿಕಿತ್ಸೆ ನೀಡುತ್ತಿರುತ್ತಾರೆ. ದಿನಾಂಕ 01-01-2022 ರಂದು ಸಂಜೆ 7 ಗಂಟೆಗೆ ನನಗೆ ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ನನ್ನ ಗ೦ಡ  ದೇವೆಂದ್ರ ಇವರನ್ನು ಕರೆದುಕೊಂಡು ಆರಗಾ ಆಸ್ಪತ್ರೆಗೆ ಬಂದಿರುತ್ತೇವೆ. ಅಲ್ಲಿ ವೈದ್ಯರು ಲಭ್ಯ ಇಲ್ಲದ ಕಾರಣ ತೀರ್ಥಹಳ್ಳಿಗೆ ಬಂದು ಪರಿಚಿತ ವೈದ್ಯರನ್ನು ಸಂಪರ್ಕಿಸಲು ಪ್ರಯಸ್ನಿಸುತ್ತೇವೆ. ಅವರು ಸಿಗದಿರುವ ಕಾರಣ ಹಳೆ ಚೀಟಿ ತೋರಿಸಿ ಔಷಧಿ ಖರೀದಿಸಿ ಬಸ್ಸಿನಲ್ಲಿ ಆರಗಾ ಕ್ಕೆ ಬಂದಿರುತ್ತೇವೆ. ರಾತ್ರಿ ಸುಮಾರು 9 ಗಂಟೆ ಸಮಯ ಆಗಿರುತ್ತದೆ, ಅರಗ ಗೇಟ್‌ನಲ್ಲಿ ಬಸ್ ಇಳಿದು ಹಾಗೆ ನಡೆದುಕೊಂಡು ಹೋಗುತ್ತಿದ್ದಾಗ, ಆರಗಾ ಗೇಟ್ ನಿಂದ ಅರೆಆರಗಾ ಊರಿನ ನಡುವೆ ಮಸೀದಿ ಹತ್ತಿರ ಏಕಾಏಕಿ ದೇವರಗುಡಿ ನಿವಾಸಿಗಳಾದ ಸಂಪತ್ ಬಿ ನ್ ಉಮೇಶ್‌ಗೌಡ,  ಆದರ್ಶ ಬಿನ್ ಪಟ್ಟಪ್ಪಗೌಡ ಮತ್ತು ಅವರ ಜೊತೆ ಇಬ್ಬರು ನನಗೆ ಅವರ ಪರಿಚಯ ಇರುವುದಿಲ್ಲ. ಇವರು ನಮ್ಮನ್ನು ಅಡ್ಡಗಟ್ಟಿ ನನ್ನ ಗಂಡ ದೇವೆಂದ್ರ ಇವರಿಗೆ ಮುಖ, ಸೊಂಟ, ಕಾಲುಗಳಿಗೆ ಹಲ್ಲೆ ಮಾಡಿ ರಕ್ತ ಗಾಯ ಮಾಡಿರುತ್ತಾರೆ.

ಬಿಡಿಸಲು ಹೋದ ನನ್ನನ್ನು ಕೈ ಹಿಡಿದು ಎಳೆದು ನಾಲ್ಕು ಜನಸೇರಿ ಪಕ್ಕದ ರಬ್ಬರ್ ಪ್ಲಾಂಟೇಷನ್ ಗೆ ಎಳೆದುಕೊಂಡು ಹೋಗಿ ನನ್ನ ಉಡುಪನ್ನು ಬಲವಂತವಾಗಿ ಕಿತ್ತುಹಾಕಿ ಬೆತ್ತಲೆ ಗೊಳಿಸಿದ್ದಾರೆ. ನನ್ನ ಗಂಡನಿಗೆ ವಿಪರೀತ ಏಟು ಬಿದ್ದಿದ್ದರಿಂದ ಅವರು ರಸ್ತೆ ಬದಿ ಎಚ್ಚರ ತಪ್ಪಿ ಬಿದ್ದಿದ್ದರಿಂದ ನನ್ನ ರಕ್ಷಣೆಗೆ ಬರಲು ಸಾದ್ಯವಾಗಲಿಲ್ಲ.

ನಾನು ಜೋರಾಗಿ ಕೂಗಿ ಕೊಂಡಾಗ ಸದರಿ ಸಂಪತ್, ಆದರ್ಶ. ಇನ್ನು ಒಬ್ಬರು ನನ್ನ ಅಂಗಾಂಗಗಳಿಗೆ ಅಸಭ್ಯವಾಗಿ ಸ್ಪರ್ಷಿಸಿ ಅತ್ಯಾಚಾರಕ್ಕೆ ಪ್ರಯತ್ನಿಸಿರುತ್ತಾರೆ. ಪುನಃ ನಾನು ಕಿರುಚಿ ಕೊಂಡಾಗ ನನ್ನ ಗಂಡ ಎಚ್ಚರಗೊಂಡು “ನನ್ನ ಹೆಂಡತಿಗೆ ಅತ್ಯಾಚಾರ ಮಾಡುತ್ತಾರೆ, ಯಾರಾದರೂ ಬನ್ನಿ ರಕ್ಷಿಸಿ” ಅಂತ ಕೂಗಿ ಕೊಂಡಾಗ ಈ ವ್ಯಕ್ತಿಗಳು ನನ್ನನ್ನು ಬಿಟ್ಟು ಓಡಿ ಹೋಗಿರುತ್ತಾರೆ. ಈ ದಿನ ಉಳಿದುಕೊಂಡೆ, ಮುಂದೆ ನಿನ್ನನ್ನು ಅತ್ಯಾಚಾರ ಮಾಡದೆ ಬಿಡುವುದಿಲ್ಲ. ಅಂತ ಬೆದರಿಕೆ ಹಾಕಿ ಹೋಗಿರುತ್ತಾರೆ.

ಜೀವ ಭಯದಿಂದ ತತ್ತರಿಸಿ ಹೋಗಿದ್ದ ನಮ್ಮನ್ನು ಸ್ಥಳೀಯರಾದ ಚಂದ್ರ, ದಿನೇಶ ಎಂಬವರು ರಕ್ಷಣೆ ಮಾಡಿ, ರಿಕ್ಷಾದಲ್ಲಿ ಮನೆಗೆ ಕಳುಹಿಸಿ ಕೊಟ್ಟಿರುತ್ತಾರೆ. ನನ್ನ ಒಳ ಉಡುಪು, ಚೂಡಿದಾರದ ಪ್ಯಾಂಟ್ ಸ್ಥಳದಲ್ಲಿ ಕಳಚಿ ಬಿದ್ದಿದ್ದು ನಾನು ಮಾನ ರಕ್ಷಣೆಗಾಗಿ ವೇಲನ್ನು ಅಡ್ಡ ಉಟ್ಟುಕೊಂಡು ಮನೆಗೆ ಬಂದಿರುತ್ತೇನೆ, ನಮಗಾದ ಅವಮಾನ ಮತ್ತು ಹಲ್ಲೆಯಿಂದ ದೈಹಿಕ ಮಾನಸಿಕ ಹಿಂಸೆಗೆ ಒಳಗಾಗಿ ಆ ದಿನ ರಾತ್ರಿ ಮನೆಯಲ್ಲೇ ಕಳೆದು ದಿನಾಂಕ 10-05-2022 ರಂದು ತೀರ್ಥಹಳ್ಳಿ ಜಿ.ಸಿ.ಅಸ್ಪತ್ರೆಗೆ ನಮ್ಮನ್ನು ಸಂಬಂಧಿಗಳು ದಾಖಲು ಮಾಡಿರುತ್ತಾರೆ. ಗಂಡ ಹೆಂಡತಿ ನಾವಿಬ್ಬರು, ಚಿಕಿತ್ಸೆ ಪಡೆದು ಈ ದಿನ ಈ ದೂರನ್ನು ಲಿಖಿತವಾಗಿ ನೀಡುತ್ತಿದ್ದೇನೆ.

ನನ್ನನ್ನು ಮೇಲ್ಕಂಡ ವ್ಯಕ್ತಿಗಳು ಎಳೆದುಕೊಂಡು ಹೋಗುವಾಗ ನನ್ನ ಎಡ ಭಾಗದ ತೊಡೆಯು ತರಚಿ ರಕ್ತ ಗಾಯವಾಗಿರುತ್ತದೆ. ನಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಪರಿಶಿಷ್ಟರಾದ ನಮಗೆ ಸೂಕ್ತ ರಕ್ಷಣೆ ನೀಡಿ ಮೇಲ್ಕಂಡ ದೌರ್ಜನ್ಯ ನಡೆಸಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕಾಗಿ ಪ್ರಾರ್ಥನೆ ಎಂದು ಸಂತ್ರಸ್ತೆ ಮಹಿಳೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.



Join Whatsapp