ಯುಎಇ ನೂತನ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಆಯ್ಕೆ

Prasthutha|

ಅಬುಧಾಬಿ: ಯುಎಇಯ ಮುಂದಿನ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಅಯ್ಕೆಯಾಗಲಿದ್ದಾರೆ ಎಂದು ಸುಪ್ರೀಮ್ ಕೌನ್ಸಿಲ್ ಶನಿವಾರ ಘೋಷಿಸಿದೆ. ಮೇ 13 ರಂದು ನಿಧನರಾದ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಉತ್ತರಾಧಿಕಾರಿಯಾಗಿ 61 ವರ್ಷದ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅವರು ದೇಶದ ಮೂರನೇ ಅಧ್ಯಕ್ಷರಾಗಲಿದ್ದಾರೆ.

- Advertisement -

2004 ರ ನವೆಂಬರ್ ನಿಂದ ಅಬುಧಾಬಿ ರಾಜಕುಮಾರನಾಗಿ ಸೇವೆ ಸಲ್ಲಿಸಿದ ಶೇಖ್ ಮುಹಮ್ಮದ್ ಅವರು ಅಬುಧಾಬಿಯ 17ನೇ ಆಡಳಿತಗಾರರಾಗಿದ್ದಾರೆ.

ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಇಂದು ಸಭೆ ಸೇರಿದ ಫೆಡರಲ್ ಸುಪ್ರೀಮ್ ಕೌನ್ಸಿಲ್, ದೇಶದ ಅಧ್ಯಕ್ಷಗಾದಿಗೆ ಮರು ಚುನಾವಣೆಗೆ ಅರ್ಹರಾಗುವ ಮೊದಲು ಐದು ವರ್ಷಗಳ ಅವಧಿಗೆ ಅಧಿಕಾರವನ್ನು ಹೊಂದಿರುತ್ತಾರೆ. ಫೆಡರಲ್ ಸುಪ್ರೀಮ್ ಕೌನ್ಸಿಲ್ ನ ಸದಸ್ಯರಲ್ಲಿ ಒಬ್ಬರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ವಾಡಿಕೆ. ಅದರಂತೆ ಇಂದು ಈ ಆಯ್ಕೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

- Advertisement -

ಶೇಖ್ ಮುಹಮದ್ ಬಿನ್ ಝಾಯೆದ್ ಅವರು ಜನವರಿ 2005 ರಿಂದ ಯುಎಇ ಸಶಸ್ತ್ರ ಪಡೆಗಳ ಡೆಪ್ಯುಟಿ ಸುಪ್ರೀಂ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಯುಎಇ ಸಶಸ್ತ್ರ ಪಡೆಗಳಿಗೆ ವ್ಯೂಹಾತ್ಮಕ ಯೋಜನೆ, ತರಬೇತಿ, ಸಂಘಟನಾ ಸಂರಚನೆ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ಯುಎಇ ಸಶಸ್ತ್ರ ಪಡೆಗಳು ಅಂತಾರಾಷ್ಟ್ರೀಯ ಮಿಲಿಟರಿ ಸಂಸ್ಥೆಗಳಿಂದ ಮೆಚ್ಚುಗೆ ಪಡೆದ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಲಾಗಿದೆ.

ಶನಿವಾರ ಮುಂಜಾನೆ ದಿವಂಗತ ಶೇಖ್ ಖಲೀಫಾ ಬಿನ್ ಝಾಯೆದ್ ಅವರಿಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಯುಎಇ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಖಲೀಫಾ ಅವರ ಉತ್ತರಾಧಿಕಾರಿಗೆ ಪ್ರತಿಜ್ಞೆಯನ್ನು ಬೋಧಿಸಿದ್ದಾರೆ.

ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ನವೆಂಬರ್ 2, 2004 ರಂದು ಅವರ ತಂದೆ ಯುಎಇಯ ಸ್ಥಾಪಕ ಪಿತಾಮಹ ಶೇಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ನಿಧನರಾದ ಒಂದು ದಿನದ ನಂತರ ಅಧ್ಯಕ್ಷರಾಗಿ ಘೋಷಿಸಲ್ಪಟ್ಟಿದ್ದರು.

2004 ರಿಂದ ಯುಎಇಯನ್ನು ಆಳಿದ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ನಿಧನದ ನಂತರ ಶುಕ್ರವಾರ ಯುಎಇ 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಶನಿವಾರದಿಂದ ಮೂರು ದಿನಗಳ ಕಾಲ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ಮುಚ್ಚಲಾಗಿದ್ದು, ಮೇ 17 ರಂದು ಕೆಲಸ ಪುನರಾರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.

Join Whatsapp