ನಾಲ್ಕು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಿದ ಶೇಖ್ ಹಸೀನಾ

Prasthutha|

ನವದೆಹಲಿ: ನಾಲ್ಕು ದಿನಗಳ ಭೇಟಿಗಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೋಮವಾರ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

- Advertisement -

ಬಹು ಕ್ಷೇತ್ರಗಳಲ್ಲಿ ಸಹಕಾರ ಅಭಿವೃದ್ಧಿಗೆ ಪೂರಕ ವಾತಾವರಣ ರೂಪಿಸುವುದು ಈ ಮಾತುಕತೆಯ ಗುರಿ. ರೈಲ್ವೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಾಗೂ ನೀರು ಹಂಚಿಕೆ ವಿಷಯದಲ್ಲಿ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ಉದ್ದೇಶ ಎರಡೂ ದೇಶಗಳದ್ದಾಗಿದೆ.

ಬಾಂಗ್ಲಾದೇಶ ಸರಕಾರದ ಬಿಮಾನ್ ಬಾಂಗ್ಲಾದೇಶ್ ಏರ್ ಲೈನ್ಸ್ ವಿಮಾನದಲ್ಲಿ ಶೇಖ್ ಹಸೀನಾ ಅವರು ಡಾಕಾದ ಹಜರತ್ ಶಾ ಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇಲೇರಿ, ನವ ದೆಹಲಿಯ ಪಾಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

- Advertisement -

“ಇದೊಂದು ಅಧಿಕೃತ ಸರಕಾರಿ ಭೇಟಿಯಾಗಿದ್ದು ಬಾಂಗ್ಲಾದೇಶದ ಪ್ರಧಾನಿಯು ಭಾರತದ ಪ್ರಧಾನಿಯ ಆಹ್ವಾನದ ಮೇಲೆ ಅವರನ್ನು ಭೇಟಿಯಾಗುವರು ಎಂದು ಬಾಂಗ್ಲಾದೇಶದ ವಿದೇಶಾಂಗ ಮಂತ್ರಿ ಡಾ. ಎ. ಕೆ. ಅಬ್ದುಲ್ ಮೊಮೇನ್ ಭಾನುವಾರ ಮಾಧ್ಯಮಗಳಿಗೆ ಸುದ್ದಿ ನೀಡಿದ್ದರು.

2019ರ ಬಳಿಕ ಶೇಖ್ ಹಸೀನಾ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ನಿಯೋಗದಲ್ಲಿ ವಿದೇಶಾಂಗ ಮಂತ್ರಿ ಮೊಮೇನ್, ವಾಣಿಜ್ಯ ಸಚಿವ ಟಿಪ್ಪು ಮುನ್ಶಿ, ರೈಲ್ವೆ ಮಂತ್ರಿ ಮೊಹಮದ್ ನೂರುಲ್ ಇಸ್ಲಾಂ ಸುಜನ್, ಸ್ವಾತಂತ್ರ್ಯ ಹೋರಾಟ ಸಚಿವ ಎ. ಕೆ. ಎಂ. ಮೊಜಾಮಿಲ್ ಹಕ್ ಮತ್ತು ಪ್ರಧಾನಿಗೆ ಹಣಕಾಸು ಸಂಬಂಧಿ ಸಲಹೆಗಾರರಾದ ಮಶಿಉರ್ ಎ. ಕೆ. ಎಂ. ರೆಹಮಾನ್ ಇದ್ದಾರೆ.

ಎರಡೂ ದೇಶಗಳು ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಶ್ರೀಮಂತ ಸಂಬಂಧವನ್ನು ಹೊಂದಿದ್ದು, ನಂಬಿಕೆ ಉಳಿಸಿಕೊಂಡು ಬಂದಿವೆ. ಅದನ್ನು ಮುಂದುವರಿಸಲಾಗುವುದು ಎಂದೂ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ತಮ್ಮ ಭೇಟಿಯ ಸಂದರ್ಭದಲ್ಲಿ ಹಸೀನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ದನ್ಕರ್ ಅವರನ್ನು ಸಹ ಭೇಟಿಯಾಗುವರು.



Join Whatsapp