ಇಡೀ ದೇಶದಲ್ಲಿ ಕೊರೋನಾ ಅಟ್ಟಹಾಸಗೈದು ಜನರು ತತ್ತರಿಸಿರುವ ಸಮಯದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ವೇಷಭೂಷಣದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅದರಲ್ಲೂ ಗಡ್ಡ ಬಿಟ್ಟಿರುವುದನ್ನು ಜನರು ಅವರವರ ಭಾವಕ್ಕೆ ತಕ್ಕಂತೆ ವ್ಯಾಖ್ಯಾನಿಸತೊಡಗಿದ್ದಾರೆ.
ಆದರೆ ಮೋದಿ ಅವರ ಗಡ್ಡದ ಮೇಲೆ ಒಂದು ಕಣ್ಣಿಟ್ಟಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ತಮ್ಮ ಖ್ಯಾತಿಗೆ ತಕ್ಕಂತೆ ಅದಕ್ಕೊಂದು ಹೊಸ ಆಂಗ್ಲ ಪದವನ್ನು ಪತ್ತೆಹಚ್ಚಿಯೇ ಬಿಟ್ಟಿದ್ದಾರೆ. ಅದುವೇ ಪೊಗೊನೊಟ್ರೊಫಿ (Pogonotrophy). ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿಯನ್ನು ನೇರವಾಗಿ ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕ ಶಶಿ ತರೂರ್ ತಮ್ಮ ಇಂಗ್ಲಿಷ್ ಭಾಷಾ ಪಾಂಡಿತ್ಯಕ್ಕೆ ಮರಳಿ ಟ್ವಿಟ್ಟರ್ ಮೂಲಕ ಮೋದಿಯ ಗಡ್ಡಕ್ಕೆ ಹೊಸ ಹೆಸರನ್ನು ಪರಿಚಯಿಸಿದ್ದಾರೆ. ಹೌದು, ತಿರುವನಂತಪುರದ ಕಾಂಗ್ರೆಸ್ ಸಂಸದ ನಿನ್ನೆ ರಾತ್ರಿ ಸರಿಯಾಗಿ 10.10 ಗಂಟೆಗೆ ತಮ್ಮ ಗೆಳೆಯರ ಬಳಗದಲ್ಲಿರುವ ಅರ್ಥಿಕ ತಜ್ಞರೊಬ್ಬರ ಸಹಾಯ ಪಡೆದು, ಪೊಗೊನೊಟ್ರೊಫಿ ಎಂಬ ಈ ಹೊಸ ಪದವನ್ನು ಹೊಸೆದುಬಿಟ್ಟರು. ಕೊರೊನಾ ವೈರಸ್ ನಿಂದ ದೇಶದ ಜನತೆ ಬಸವಳಿದಿರುವುದನ್ನು ಕಂಡು ಪ್ರಧಾನಿ ಮೋದಿ ಗಡ್ಡಬಿಟ್ಟಿದ್ದಾರೆಂದು ಲೇವಡಿ ಮಾಡುವ ರೀತಿಯಲ್ಲಿ ಈ ಪೊಗೊನೊಟ್ರೊಫಿ ಪದ ಮೋದಿ ಗಡ್ಡಕ್ಕೆ ಚೆನ್ನಾಗಿ ಒಪ್ಪುತ್ತದೆ ಎಂದಿದ್ದಾರೆ ತರೂರ್.
ಇಷ್ಟಕ್ಕೂ ವಿಶ್ವಸಂಸ್ಥೆಯ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಮಾಜಿ ಅಧೀನ ಪ್ರಧಾನ ಕಾರ್ಯದರ್ಶಿ ಶಶಿ ತರೂರ್ ‘ಸಂಶೋಧಿಸಿದ’ ಪೊಗೊನೊಟ್ರೊಫಿ ಅಂದ್ರೆ ಗಡ್ಡವನ್ನು ಬಿಡುವುದು ಎಂದರ್ಥ. ಟ್ವಿಟ್ಟರ್ ನಲ್ಲಿ ಈ ಪದ ಬಹಳ ಟ್ರೆಂಡ್ ಆಗಿದ್ದು ನೆಟ್ಟಿಗರೂ ಶಶಿ ತರೂರ್ ಅವರ ಈ ಹೊಸ ವ್ಯಾಖ್ಯಾನವನ್ನು ಸ್ವಾರಸ್ಯಕರವಾಗಿ ಚರ್ಚೆ ಮಾಡುತ್ತಿದ್ದಾರೆ.