ಪ್ರತಿಪಕ್ಷಗಳ ಒಗ್ಗಟ್ಟಿಗಾಗಿ ಖರ್ಗೆ, ರಾಹುಲ್, ಎಎಪಿ, ಎಡ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿದ ಶರದ್ ಪವಾರ್

Prasthutha|

ನವದೆಹಲಿ: ಅದಾನಿ ಗುಂಪಿನಲ್ಲಿ ನನಗೆ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕರಿಗೆ ಆಘಾತ ಉಂಟು ಮಾಡಿದ್ದ ಎನ್ ಸಿಪಿ ಅಗ್ರ ನಾಯಕ ಶರದ್ ಪವಾರ್ ಅವರು ಮರುದಿನವೇ ವಿರೋಧ ಪಕ್ಷಗಳ ಒಗ್ಗಟ್ಟಿಗಾಗಿ ಕಾಂಗ್ರೆಸ್ಸಿನ ಖರ್ಗೆ, ರಾಹುಲ್ ಗಾಂಧಿ ಮತ್ತು ಎಡ ಪಕ್ಷಗಳ, ಎಎಪಿ ನಾಯಕರ ಜೊತೆಗೆ ಮಾತುಕತೆ ನಡೆಸಿದರು. ಪ್ರತಿಪಕ್ಷಗಳು ಒಟ್ಟಾಗಲೇಬೇಕು, ಎಲ್ಲರನ್ನೂ ಕಂಡು ಮಾತನಾಡುತ್ತೇನೆ ಎಂದು ಬಳಿಕ ಪವಾರ್ ಹೇಳಿದರು.

- Advertisement -


ಇದೇ ವೇಳೆ ದಿಲ್ಲಿಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಪ್ರತಿಪಕ್ಷಗಳ ಒಕ್ಕೂಟಕ್ಕಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಡ ಪಕ್ಷಗಳ ನಾಯಕರಾದ ಸೀತಾರಾಮ ಯೆಚೂರಿ, ಡಿ. ರಾಜಾ ಮತ್ತು ಎಎಪಿಯ ಸಂಜಯ ಸಿಂಗ್ ರನ್ನು ಭೇಟಿಯಾದರು. ಇದೆಲ್ಲ ಬಿಹಾರದ ಮಟ್ಟಿಗಿನ ಒಕ್ಕಟ್ಟಿನ ಹೋರಾಟಕ್ಕಾಗಿ. ನಿತೀಶ್ ಅವರು ಎಎಪಿ ಸಂಚಾಲಕ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲರನ್ನೂ ಭೇಟಿಯಾದರು, ಬಳಿಕ ಪಾಟ್ನಾಕ್ಕೆ ತೆರಳಿದರು ಎಂದು ತಿಳಿದುಬಂದಿದೆ.


2024ರ ಚುನಾವಣೆ ವೇಳೆ ಒಗ್ಗಟ್ಟು ಆಗಲೇ ಬೇಕಾಗಿದೆಯಾದ್ದರಿಂದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ದಿಲ್ಲಿ ಮುಖ್ಯಮಂತ್ರಿ ಕೇಜ್ರೀವಾಲರ ಜೊತೆಗೂ ನಾನು ಮತ್ತೆ ಮಾತನಾಡುತ್ತೇನೆ ಎಂದೂ ಶರದ್ ಪವಾರ್ ಹೇಳಿದರು.

- Advertisement -


ಅದಾನಿ ಕಂಪೆನಿ ಮೇಲೆ ನಂಬಿಕೆ ಇದ್ದರೂ ವಿರೋಧ ಪಕ್ಷಗಳ ಒಗ್ಗಟ್ಟಿಗಾಗಿ ಅದಾನಿ ಅವ್ಯವಹಾರ ತನಿಖೆಗೆ ಜೆಪಿಸಿ- ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂಬ ಒತ್ತಾಯವನ್ನು ಬೆಂಬಲಿಸುತ್ತೇನೆ ಎಂದೂ ಪವಾರ್ ಹೇಳಿದರು.


ಪವಾರ್ ಬಳಿಕ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು,
“ಹಲವು ರಾಜಕೀಯ ಪಕ್ಷಗಳು ಸಮಾನ ಧ್ಯೇಯೋದ್ದೇಶಗಳನ್ನು ಹೊಂದಿವೆ. ಅವುಗಳನ್ನು ಒಗ್ಗೂಡಿಸುವ ಪ್ರಯತ್ನ ಆಗಬೇಕು. ರಾಜ್ಯ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಈ ನಿಟ್ಟಿನಲ್ಲಿ ನಡೆಸಿರುವ ಪ್ರಯತ್ನವು ಎಲ್ಲರಿಗೂ ಲಾಭಕರವಾದುದಾಗಿದೆ. ಮಮತಾ ಬ್ಯಾನರ್ಜಿಯವರ ಟಿಎಂಸಿ ಮತ್ತು ಅರವಿಂದ ಕೇಜ್ರೀವಾಲರ ಎಎಪಿ ಜೊತೆಗೆ ಹೆಚ್ಚಿನ ಮಾತುಕತೆ ಆಗಿಲ್ಲ; ಪ್ರಯತ್ನ ಮುಂದುವರಿಯುತ್ತದೆ. ಒಗ್ಗಟ್ಟಿನ ಪ್ರಕ್ರಿಯೆಯಲ್ಲಿ ಈ ಮಾತುಕತೆಗಳೆಲ್ಲ ತುಂಬ ಮುಖ್ಯ.” ಎಂದರು.


ಖರ್ಗೆಯವರು ಹೀಗೆಂದರು;
“ಶರದ್ ಪವಾರ್ ಅವರು ನಮಗೆ ಮಾರ್ಗದರ್ಶನ ಮಾಡಲು ಮುಂಬೈಯಿಂದ ನೇರವಾಗಿ ಬಂದಿದ್ದಾರೆ ಎನ್ನುವುದು ಸಂತೋಷದ ಸಂಗತಿ.” ಎಂದು ಖರ್ಗೆ ಹೇಳಿದರು.
ಹಾಗೆಯೇ ಬಿಹಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಾದ ನಿತೀಶ್, ತೇಜಸ್ವಿ ಯಾದವ್ ಜೊತೆಗೆ ಮಾತನಾಡಿದ ಖರ್ಗೆಯವರು ಹೀಗೆಂದರು. “ಈ ದೇಶ, ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನವನ್ನು ಕಾಪಾಡಲು, ಅಭಿಪ್ರಾಯ ಹಾಗೂ ವಾಕ್ ಸ್ವಾತಂತ್ರ್ಯ, ಉಳಿಸಲು, ನಿರುದ್ಯೋಗ, ಹಣದುಬ್ಬರ, ಸ್ವಾಯುತ್ತ ಸಂಸ್ಥೆಗಳ ದುರ್ಬಳಕೆ ನಿಲ್ಲಿಸಲು ಎಲ್ಲ ಸಮಾನ ಮನಸ್ಕರು ಒಟ್ಟಿಗೆ ಸೇರಬೇಕು” ಎಂದರು.


“ನಾವು ಒಟ್ಟು ಸೇರಿ ಹೋರಾಡಲು ತೀರ್ಮಾನಿಸಿದ್ದೇವೆ. ಎಲ್ಲ ಪಕ್ಷಗಳವರ ಜೊತೆಗೂ ನಾವು ಮಾತನಾಡುವೆವು. ಎಲ್ಲರನ್ನೂ ಭೇಟಿಯಾಗಿ ಒಗ್ಗೂಡಿ ಮುನ್ನಡೆಯುತ್ತೇವೆ” ಎಂದು ಖರ್ಗೆ ಹೇಳಿದರು.

Join Whatsapp