ಬೆಂಗಳೂರು: ಸಚಿವ ಚೆಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರ ಸಂಬಂಧಿಸಿ ಸಮರ್ಥನೆ ಮಾಡಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ. ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ ‘ಸಿದ್ದಕಲೆ’ ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ ಎಂದಿದ್ದಾರೆ. ನಕಲಿ ಪತ್ರ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ (!?) ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ? ಸುಳ್ಳಿನ ಪತ್ರಕ್ಕೆ ಮಾನ್ಯ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ?, ರಾಜಧರ್ಮದ ಪ್ರವಚನಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದು ತರವೇ?, ಸ್ವಯಂ ಘೋಷಿತ ನಕಲಿ ಸಂವಿಧಾನ ತಜ್ಞನಿಗೆ ಇದು ಭೂಷಣವಲ್ಲ. ಕಂಡೋರ ಭುಜದ ಮೇಲೆ ಬಂದೂಕಿಟ್ಟು ಇನ್ನೊಬ್ಬರ ರಾಜಕೀಯ ಜೀವನ ಎತ್ತಿಬಿಡುವ ನಿಮ್ಮಂಥ ಎತ್ತುವಳಿ ಗಿರಾಕಿಗೆ ನಕಲಿಪತ್ರಗಳ ಸೃಷ್ಟಿ ಬೆಣ್ಣೆ ಕಡಿದಷ್ಟೇ ಸಲೀಸು. ಮತ್ತೊಬ್ಬರ ಶ್ರಮದ ಬೆವರೇ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹವಿಸ್ಸು ಎಂದು ಹೆಚ್ಡಿಕೆ ಗರಂ ಆಗಿದ್ದಾರೆ.
ನಿಮ್ಮ ಸಚಿವರ ವಿರುದ್ಧ ನಿಮ್ಮ ಕಾಂಗ್ರೆಸ್ ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ ‘ನಕಲಿರಾಮ’ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ ‘ಅಸಲಿ’ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ?. ನಿಮ್ಮ ರಾಜಕೀಯ ಬದುಕಿಗೆ ಬ್ಲ್ಯಾಕ್’ಮೇಲೇ ಬಂಡವಾಳ. ಗೃಹ ಸಚಿವರು,ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ‘ಅಪ್ಪಯ್ಯ ಮತ್ತು ಅತೀಂದ್ರನ ಆಟಾಟೋಪ’ ಕಂಡು ಹೌಹಾರಿದವರು ಯಾರು?, ವರ್ಗಾವಣೆ ಪಟ್ಟಿಗೆ ಅಲ್ಲಿ ಬಿದ್ದ ಟಿಕ್ಕುಗಳ ಲೆಕ್ಕ ಹೇಳಬೇಕಾ ಟಿಕ್ ಟಿಕ್ ಸಿದ್ದರಾಮಯ್ಯ ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಪೊಲೀಸ್ ವರ್ಗಾವಣೆ ವಿಚಾರ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ, ಅಪ್ಪಯ್ಯ ಮತ್ತು ಅತೀಂದ್ರನ ಆಟಾಟೋಪ ಕಂಡು ಹೌಹಾರಿದವರು ಯಾರು ಎಂದು ಪ್ರಶ್ನಿಸಿದ ಅವರು, ವರ್ಗಾವಣೆ ಮೀಟಿಂಗ್ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಆರೋಪ ಮುಂದುವರಿಸಿದರು.
ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ!! ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ 'ಸಿದ್ದಕಲೆ' ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ. 1/5#YstTax #CashForPosting
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 8, 2023