ಬ್ರಿಸ್ಬೇನ್: ಗಾಯದಿಂದ ಚೇತರಿಸಿಕೊಂಡು ಟಿ20 ವಿಶ್ವಕಪ್ ಟೂರ್ನಿಗೆ ಸಂಪೂರ್ಣ ಫಿಟ್ ಆಗಿ ಮರಳಿರುವ ಪಾಕಿಸ್ತಾನದ ಪ್ರಮುಖ ಎಡಗೈ ವೇಗಿ ಶಾಹಿನ್ ಅಫ್ರೀದಿ, ಅಭ್ಯಾಸ ಪಂದ್ಯದಲ್ಲೇ ತನ್ನ ಬೌಲಿಂಗ್ ಮೊನಚನ್ನು ಪ್ರದರ್ಶಿಸಿದ್ದಾರೆ.
ಅಪ್ಘಾನಿಸ್ತಾದ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಶಾಹೀನ್ ಅಫ್ರಿದಿ ಎಸೆದ ಮಿಂಚಿನ ಯಾರ್ಕರ್ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾದ ಬ್ಯಾಟ್ಸ್‌ಮನ್ ರಹ್ಮಾನುಲ್ಲಾ ಗುರ್ಬಾಜ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಪಂದ್ಯದ ಮೊದಲ ಓವರ್‌ನ ಐದನೇ ಎಸೆತದಲ್ಲಿ ಶಾಹಿನ್, ಆಫ್ಘಾನ್ ಆರಂಭಿಕ ಆಟಗಾರ ಗುರ್ಬಾಜ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಕಾಲಿಗೆ ಪೆಟ್ಟು ಮಾಡಿಕೊಂಡ ಗುರ್ಬಾಜ್‌ರನ್ನು ಮೈದಾನದಲ್ಲೇ ಪರೀಕ್ಷೆ ನಡೆಸಿದ ಫಿಸಿಯೋಗಳು, ಹೆಚ್ಚಿನ ಪರೀಕ್ಷೆಯ ಅಗತ್ಯ ಮನಗಂಡು, ಹೆಚ್ಚುವರಿ ಆಟಗಾರನ ಮೂಲಕ ಮೈದಾನದಿಂದ ಹೊತ್ತುಕೊಂಡು ಕರೆದೊಯ್ದರು. ಶಾಹಿನ್ ಯಾರ್ಕರ್ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದೆರೆ, ಚೆಂಡು ಗುರ್ಬಾಜ್ ಕಾಲಿನ ಬೆರಳಿಗೆ ಬಲವಾಗಿ ಬಡಿದಿದೆ. ಇದರಿಂದ ಬ್ಯಾಟ್ಸ್‌ಮನ್ ಮೈದಾನದಲ್ಲೇ ನೋವಿನಿಂದ ನರಳಾಡಿದ್ದಾರೆ. ಗುರ್ಬಾಜ್ ಅವರ ಎಡಪಾದಕ್ಕೆ ಗಾಯವಾಗಿದ್ದು, ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಫ್ಘಾನಿಸ್ತಾನದ ಪ್ರಮುಖ ಬ್ಯಾಟರ್, ವಿಕೆಟ್ಕೀಪರ್ ಗುರ್ಬಾಜ್ ಗಾಯಗೊಂಡಿರುವುದು, ಟೂರ್ನಿಯ ಪ್ರಧಾನ ಹಂತ ಆರಂಭವಾಗುವುದಕ್ಕೆ ಮೊದಲೇ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಈಗಾಗಲೇ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿರುವ ಅಫ್ಘಾನಿಸ್ತಾನ, ಶನಿವಾರ ಪರ್ತ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.
ಮಳೆಯಿಂದ ಪಂದ್ಯ ರದ್ದು
ಅಫ್ಘಾನಿಸ್ತಾನ-ಪಾಕಿಸ್ತಾನ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗೊಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಅಪ್ಘಾನಿಸ್ತಾನ, ನಾಯಕ ಮುಹಮ್ಮದ್ ನಬಿ ಗಳಿಸಿದ ಅರ್ಧಶತಕದ (51 ರನ್) ನೆರವಿನಿಂದ 6 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿತ್ತು. ಪಾಕ್ ಪರ ಬೌಲಿಂಗ್‌ನಲ್ಲಿ ಶಾಹಿನ್ ಅಫ್ರೀದಿ ಮತ್ತು ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು. ಪಾಕಿಸ್ತಾನ ಚೇಸಿಂಗ್ ಆರಂಭಿಸಿ 2.2 ಓವರ್ ಕಳೆಯುವಷ್ಟರಲ್ಲಿ ಮಳೆ ಸುರಿದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.