ಭಕ್ತರಿಗೆ ಮಾನವ ಮಲ ತಿನ್ನಿಸಿ, ಹೊಡೆಯುತ್ತಿದ್ದ ದೇವ ಮಾನವಿಗೆ ಕಠಿಣ ಶಿಕ್ಷೆ

Prasthutha|

ಸಿಂಗಾಪುರ: ಪಾಪ ಕಳೆಯುವ ಹೆಸರಲ್ಲಿ ಭಕ್ತರಿಗೆ ಮಾನವ ಮಲ ತಿನ್ನಿಸಿ ಅವರನ್ನು ಹೊಡೆದು ಬಡೆದು ಕ್ರೂರವಾಗಿ ಹಿಂಸೆ ನೀಡಿದ ಸಿಂಗಾಪುರದ ಸ್ವಯಂಘೋಷಿತ ದೇವ ಮಾನವಿಗೆ ಅಲ್ಲಿನ ನ್ಯಾಯಾಲಯ ಹತ್ತೂವರೆ ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

- Advertisement -

54 ವರ್ಷದ ವೂ ಮೇ ಹೋ ಜೈಲು ಶಿಕ್ಷೆಗೆ ಗುರಿಯಾದ ಭಾರತದ ಅದ್ಯಾತ್ಮದ ಹೆಸರಲ್ಲಿ ಸಿಂಗಾಪುರದಲ್ಲಿ ಕಾರ್ಯಾಚರಿಸುತ್ತಿದ್ದ ಮಹಿಳೆ. 2020ರಲ್ಲಿ ಕೆಲ ಭಕ್ತರು ಆಕೆಯ ವಿರುದ್ಧ ಆಕೆಯ ಕ್ರೌರ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ ಅದೇ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ಆಕೆಯ ಕ್ರೌರ್ಯ ಸಾಬೀತಾದ ಹಿನ್ನೆಲೆಯಲ್ಲಿ ಸಿಂಗಾಪುರದ ನ್ಯಾಯಾಲಯ ಆಕೆಗೆ ಕಠಿಣ ಶಿಕ್ಷೆ ವಿಧಿಸಿದೆ.

ಭಾರತದ ಧಾರ್ಮಿಕ ಗುರು ಶ್ರೀ ಶಕ್ತಿ ನಾರಾಯಣಿ ಅಮ್ಮ ಅವರನ್ನು ನಂಬುತ್ತಿದ್ದ 30 ಅನುಯಾಯಿಗಳನ್ನು ಹೊಂದಿದ್ದ ಈಕೆ 2012ರಿಂದಲೂ ಈ ಗುಂಪನ್ನು ನಡೆಸಿಕೊಂಡು ಬಂದಿದ್ದಾಳೆ. ತಾನು ದೇವರೊಂದಿಗೆ ಮಾತನಾಡುವೆ ಎಂದು ನಂಬಿಸಿದ ಆಕೆ ತನ್ನನ್ನು ದೇವರೆಂದು ಕರೆಯಬೇಕೆಂದು ಆ ಗುಂಪಿಗೆ ಹೇಳಿದ್ದಳು.

- Advertisement -

ತನ್ನ ಅನುಯಾಯಿಗಳಿಗೆ ಆಕೆ ತಾನು ದೇವರ ಜೊತೆ ಸಂಪರ್ಕ ಸಾಧಿಸಬಲ್ಲ ನಿಜವಾದ ದೇವ ಮಾನವಿ ಎಂದು ನಂಬಿಸಿದ್ದಳು. ಅವರ ಪಾಪ ಕರ್ಮಗಳ ನಿರ್ಮೂಲನೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ಕೆಲಸ ಶುರು ಮಾಡಿದ್ದಳು. ಅಲ್ಲದೆ, ಅವಿಧೇಯತೆ ತೋರಿದ ಭಕ್ತರಿಗೆ ಬರೀ ಹಣ ವಸೂಲಿ ಮಾಡುವುದು ಮಾತ್ರವಲ್ಲದೆ, ಅವರಿಗೆ ತಪ್ಪು ಮಾಡಿದ್ದಾರೆ ಎಂದು ಹೇಳಿ ಕ್ರೂರವಾಗಿ ಹಿಂಸೆ ನೀಡಿದ್ದಳು.ಮಾನವ ಮಲವನ್ನು ಬಲವಂತವಾಗಿ ತಿನ್ನಿಸುವುದು, ದೊಣ್ಣೆಯಲ್ಲಿ ಹೊಡೆಯುವುದು, ಕಟ್ಟಡದಿಂದ ಕೆಳಗೆ ಹಾರುವಂತೆ ಮಾಡುವುದು, ಅವರ ಹಲ್ಲುಗಳನ್ನು ಇಕ್ಕಳದಿಂದ ಕೀಳಿಸುವುದು ಸೇರಿದಂತೆ ಭಕ್ತರ ಮೇಲೆ ಹಲವು ರೀತಿಯ ಕ್ರೌರ್ಯ ಮೆರೆದಿದ್ದಳು.

ಇನ್ನು ತಮ್ಮ ನೋವನ್ನು ಅಥವಾ ತಮ್ಮ ಸಂಬಂಧಿಕರ ಸಮಸ್ಯೆಯನ್ನು ಇಲ್ಲದಂತೆ ಮಾಡುತ್ತಾಳೆ ಈಕೆ ಎಂಬ ನಂಬಿಕೆಯಲ್ಲಿ ಜನ ಈಕೆಯ ಬಳಿ ಬರುತ್ತಿದ್ದರು. ಈ ವೇಳೆ ಅವರಿಗೆ ಈಕೆ ತಮ್ಮ ಕೆಟ್ಟ ಕರ್ಮಗಳನ್ನು ಹೋಗಲಾಡಿಸಿ ಒಳ್ಳೆಯ ಕರ್ಮಗಳನ್ನು ಪಡೆಯಲು ಭಾರತದಲ್ಲಿರುವ ಅಮ್ಮನಿಗೆ ಹಣ ಪಾವತಿ ಮಾಡುವಂತೆ ಹೇಳುತ್ತಿದ್ದಳು. ಅಲ್ಲದೇ ತನ್ನ ಅನುಯಾಯಿಗಳ ಬಳಿ ತಮ್ಮ ಬಳಿ ಎಷ್ಟು ಹಣ ಇದೆ ಎಂದು ಹೇಳುವಂತೆ ಒತ್ತಾಯಿಸುತ್ತಿದ್ದಳು. ಅಲ್ಲದೇ ಸುಳ್ಳು ಹೇಳಿದರೆ ದೇವರು ಶಿಕ್ಷೆ ನೀಡುತ್ತಾರೆ ಎಂದು ಹೇಳುತ್ತಿದ್ದಳು.

ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದ ಆಕೆ ತನಗಾಗಿ ಆಸ್ತಿಗಳನ್ನು ವಾಹನವನ್ನು ಖರೀದಿಸುವಂತೆ ಹೇಳುತ್ತಿದ್ದಳು. ಬಳಿಕ ಅದನ್ನು ತನ್ನ ವೈಯಕ್ತಿಕ ಕೆಲಸಕ್ಕೆ ಬಳಸುತ್ತಿದ್ದಳು. ಅಲ್ಲದೆ, ತನಗೆ ಹಣ ನೀಡುವುದಕ್ಕಾಗಿ ಭಕ್ತರೇ ಬ್ಯಾಂಕ್‌ನಿಂದ ಲೋನ್ ಮಾಡುವಂತೆ ಮಾಡಿದ್ದಳು ಎಂದು ಏರ್ ಏಷ್ಯಾ ವರದಿ ಮಾಡಿದೆ.

2012ರಿಂದ 2020ರ ಸಮಯದಲ್ಲಿ ಆಕೆ 7 ಮಿಲಿಯನ್ ಡಾಲರ್ ಹಣವನ್ನು ಭಕ್ತರಿಂದ ವಸೂಲಿ ಮಾಡಿದ್ದಾಳೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಹತ್ತು ಭಕ್ತರನ್ನು ತನ್ನ ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಳು. ಅಡಿಗೆ ಮಾಡುವುದು ದಿನಸಿ ತರುವುದು, ಮನೆ ಕ್ಲೀನ್ ಮಾಡುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದಳು. ಕೆಲವು ಭಕ್ತರು ತಮ್ಮ ಕೆಲಸ ತೊರೆಯುವುದಾಗಿ ಹೇಳಿದಾಗ ಅವರಿಗೆ ಕ್ರೂರವಾಗಿ ಹಿಂಸೆ ನೀಡಲು ಶುರು ಮಾಡಿದ್ದಳು, ಇವಳ ಕ್ರೌರ್ಯದಿಂದಾಗಿ ಒಬ್ಬಳು ಭಕ್ತೆ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾಳೆ ಎಂದು ವರದಿ ಆಗಿದೆ.



Join Whatsapp