ಆಮ್ ಆದ್ಮಿ ಪಾರ್ಟಿಗೆ ಹಲವು ಮುಖಂಡರ ಸೇರ್ಪಡೆ

Prasthutha|

ಬೆಂಗಳೂರು: ಮಾಜಿ ಜೆಡಿಎಸ್ ಹಾಗೂ ರೋಟರಿ ಕ್ಲಬ್ ಮುಖಂಡರಾದ ಬಿ. ಕರಿ ಗೌಡ, ಸಮಾಜವಾದಿ ಪಾರ್ಟಿ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶಾಂತಾ ಮೋಹನ್, ಕಿರುತೆರೆ ಹಾಗೂ ಹಿರಿತೆರೆ ನಟ ಕಿಶನ್, ಹೊಳಲ್ಕೆರೆ ಮಾಜಿ ಶಾಸಕ ಜಿ.ದುಗ್ಗಪ್ಪರವರ ಪುತ್ರಿ ಸುವರ್ಣ ದುಗ್ಗಪ್ಪ, ಸಮಾಜವಾದಿ ಪಾರ್ಟಿ ಯುವ ನಾಯಕ ರವಿ (ದೇವೇಂದ್ರ ಚೌಡಿ) ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು. ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಇವರನ್ನು ಪಕ್ಷದ ರಾಜ್ಯ ಕಚೇರಿಯಲ್ಲಿ ಬರಮಾಡಿಕೊಂಡರು.

- Advertisement -

ಈ ವೇಳೆ ಮಾತನಾಡಿದ  ಮೋಹನ್ ದಾಸರಿ  “ಬಿ. ಕರಿ ಗೌಡ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳು. ಎಂಕಾಂ, ಎಂಬಿಎ, ಸಿಎ ಶಿಕ್ಷಣವನ್ನು ಪೂರೈಸಿದ್ದಲ್ಲದೇ, ಕಂಪನಿ ಸೆಕ್ರೆಟರಿ ಶಿಕ್ಷಣದ ಇಂಟರ್ಮೀಡಿಯೇಟ್ ಮಾಡಿದ್ದಾರೆ. ಕಳೆದ 30 ವರ್ಷಗಳಿಂದ ಲೆಕ್ಕ ಪರಿಶೋಧನೆ ಹಾಗೂ ತೆರಿಗೆಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ʻರೋಟರಿ ಬೆಂಗಳೂರು ಬನಶಂಕರಿʼ ಅಧ್ಯಕ್ಷರಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ, ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಮಾಜವಾದಿ ಪಾರ್ಟಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶಾಂತಾ ಮೋಹನ್ ರವರು ಮಹಿಳೆಯರ ಸಂಘಟನೆಯಲ್ಲಿ ನಿಪುಣರಾಗಿದ್ದು, ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಹಲವು ವರ್ಷಗಳ ಕಾಲ ಹೋರಾಟ ಮಾಡಿದ ಅನುಭವ ಹೊಂದಿದ್ದಾರೆ. ಹೊಳಲ್ಕೆರೆಯಲ್ಲಿ 20 ವರ್ಷಗಳ ಕಾಲ ಶಾಸಕರಾಗಿದ್ದ ದುಗ್ಗಪ್ಪರವರ ಪುತ್ರಿ ಸುವರ್ಣ ದುಗ್ಗಪ್ಪರವರು ಸಮಾಜವಾದಿ ಪಾರ್ಟಿಯ ಎಸ್ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಿಶನ್ ರವರು ನಟನೆಯ ಜೊತೆಗೆ ಸಮಾಜವಾದಿ ಪಕ್ಷದ ರಾಜ್ಯ ಯುವಘಟಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರವಿ (ದೇವೇಂದ್ರ ಚೌಡಿ) ಕೂಡ ಅದೇ ಪಕ್ಷದ ಯುವನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ” ಎಂದು ಪರಿಚಯಿಸಿದರು.

ಸೇರ್ಪಡೆ ಸಮಾರಂಭದಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ಹಾಜರಿದ್ದರು.

Join Whatsapp