ತಿರುವನಂತಪುರಂ: ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ತಮಗೆ ಶೋಕಾಸ್ ನೋಟಿಸ್ ನೀಡಿದ್ದನ್ನು ಪ್ರಶ್ನಿಸಿ ಕೇರಳದ ಏಳು ವಿಶ್ವವಿದ್ಯಾಲಯಗಳ ಕುಲಪತಿಗಳು ಬುಧವಾರ ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠವು ಇಂದು ಅವರ ಮನವಿಯನ್ನು ಪರಿಗಣಿಸಲಿದೆ.
ರಾಜೀನಾಮೆ ಸಲ್ಲಿಸುವಂತೆ ಆದೇಶಿಸಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡದ್ದರಿಂದ ರಾಜ್ಯ ಪಾಲರು ಏಳು ಕುಲಪತಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಖಾನ್ ಅವರು ಒಂಬತ್ತು ಸರಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ಅಕ್ಟೋಬರ್ 23 ರಂದು ಸೂಚಿಸಿದ್ದರು. ಆದರೆ, ಮರುದಿನವೇ ಈ ಆದೇಶಕ್ಕೆ ತಡೆ ನೀಡಿರುವ ಹೈಕೋರ್ಟ್, ವಿವಿಗಳ ಪದನಿಮಿತ್ತ ಕುಲಪತಿಯಾಗಿರುವ ರಾಜ್ಯಪಾಲರು ಶೋಕಾಸ್ ನೋಟಿಸ್ ಗಳ ಆಧಾರದ ಮೇಲೆ ಆದೇಶ ಹೊರಡಿಸುವವರೆಗೆ ಕುಲಪತಿಗಳು ತಮ್ಮ ಹುದ್ದೆಗಳಲ್ಲಿ ಮುಂದುವರಿಯಬಹುದು ಎಂದು ಹೇಳಿತ್ತು.