ಇಂದೋರ್: ಮಧ್ಯ ಪ್ರದೇಶದ ಇಂದೋರ್ ಎಂಬಲ್ಲಿನ ವಿಜಯ್ ನಗರದ ಎರಡು ಅಂತಸ್ತಿನ ವಸತಿ ಕಟ್ಟಡದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ಏಳು ಜನರು ಸಜೀವವಾಗಿ ದಹನವಾಗಿದ್ದಾರೆ. ಇದುವರೆಗೂ ಸುಮಾರು 11 ಮಂದಿಯನ್ನು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.
ಹೆಚ್ಚಿನ ಸಾವುಗಳು ಉಸಿರುಗಟ್ಟುವಿಕೆಯಿಂದ ನಡೆದಿದೆ ಎಂದು ಹೇಳಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ನಡೆದಿದ್ದು, ವಸತಿ ಸಂಕೀರ್ಣದ ಪಾರ್ಕಿಂಗ್ ನಲ್ಲಿ ವಾಹನಗಳಿಗೆ ಬೆಂಕಿ ತಗುಲಿದೆ ಎಂದು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ತಹಝೀಬ್ ಖಾಝಿ ತಿಳಿಸಿದ್ದಾರೆ.
ಬೆಂಕಿ ನಿಯಂತ್ರಣಕ್ಕೆ ತರಲು ಸುಮಾರು 3 ಗಂಟೆ ಪರಿಶ್ರಮ ಬೇಕಾಯಿತು ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಎಂದು ತಿಳಿಸಿದ್ದಾರೆ.
ಸದ್ಯ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಖಾಝಿ ತಿಳಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾದ್ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.
ಘಟನೆಯ ಬಗ್ಗೆ ಮುಖ್ಯಮಂತ್ರಿ ತನಿಖೆ ಆದೇಶಿಸಿದ್ದಾರೆ ಮತ್ತು ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದ್ದಾರೆ.