ನಾರಾಯಣ ಗುರು ಅಭಿವೃದ್ಧಿ ಕೋಶ ಸ್ಥಾಪಿಸಿ ಸರ್ಕಾರದಿಂದ ಬಿಲ್ಲವ ಸಮುದಾಯದ ದಿಕ್ಕು ತಪ್ಪಿಸುವ ಕೆಲಸ: ಸ್ವಾಮೀಜಿ

Prasthutha|

ಕಾರ್ಕಳ: ಬ್ರಹ್ಮ ಶ್ರೀ ನಾರಾಯಣಗುರು ಅಭಿವೃದ್ದಿ ಕೋಶ ಸ್ಥಾಪಿಸಿ ಬಿಲ್ಲವ ಸಮುದಾಯದ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಮೇಲ್ವರ್ಗದ ಸಮುದಾಯಗಳಂತೆ ನಮ್ಮ ಸಮಾಜಕ್ಕೂ ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪಿಸಿ 500 ಕೋಟಿ ರೂ. ಕಾದಿರಿಸುವಂತೆ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 16 ರಾಜ್ಯಗಳಲ್ಲಿ 84 ವಿವಿಧ ಹೆಸರಿನಲ್ಲಿ ನಮ್ಮದೇ ಸಮುದಾಯಗಳಿವೆ. ದೇಶದಲ್ಲಿ ಶೇ.12ರಷ್ಟು, ಕರ್ನಾಟಕದಲ್ಲಿ 70 ಲಕ್ಷ ಜನರಿದ್ದಾರೆ. ಆದರೆ ರಾಜಕೀಯವಾಗಿ ನಮಗೆ ಸೂಕ್ತ ಸ್ಥಾನಮಾನಗಳು ದೊರೆತಿಲ್ಲ. ರಾಜ್ಯದಲ್ಲಿ 7 ಜನ ಶಾಸಕರು ಹಾಗೂ 2 ಜನ ಸಚಿವರಿದ್ದರೂ ಸಮುದಾಯದ ಅಭಿವೃದ್ಧಿಗೆ ಕೊಡುಗೆ ಬರೀ ಶೂನ್ಯ ಎಂದರು.

ರಾಜ್ಯದಲ್ಲಿ ಇಬ್ಬರು ನಮ್ಮ ಸಮುದಾಯದ ಸಚಿವರುಗಳಿದ್ದಾರೆ. ಇಚ್ಛಾಶಕ್ತಿಯ ಕೊರತೆಯಿಂದ ಸಮುದಾಯದ ಅಭಿವೃದ್ಧಿಗೆ ಅವರಿಬ್ಬರ ಕೊಡುಗೆ ಏನೂ ಇಲ್ಲ. ಸರಕಾರದಿಂದ ಹಿಂದುಳಿದ ವರ್ಗಗಳ ಹಕ್ಕನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಸಿಗಂಧೂರು ಚೌಡೇಶ್ವರಿ ದೇಗುಲದ ಆಡಳಿತವನ್ನು ಮೇಲ್ವರ್ಗಕ್ಕೆ ನೀಡುವ ಹುನ್ನಾರದಲ್ಲಿ ಸರಕಾರ ಮೂಗು ತೂರಿಸುತ್ತಿರುವುದು, ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಸಕ್ತಿ ವಹಿಸದಿರುವುದು ಹಾಗೂ ಶೇಂದಿ ಉತ್ಪಾದನೆ ಕುರಿತಂತೆ ಸ್ಪಷ್ಟ ಕ್ರಮಕ್ಕೆ ಮುಂದಾಗದಿರುವುದರಿಂದ ಸಮುದಾಯದ ಸಚಿವರಿದ್ದರೂ ನಮಗೆ ಪ್ರಯೋಜನವಾಗುತ್ತಿಲ್ಲ ಎಂದರು.

- Advertisement -

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶೇಂದಿಯನ್ನು ನಿಷೇಧಿಸಲಾಗಿದೆ. ಶೇಂದಿಯಿಂದ ನಮ್ಮ ಸಮುದಾಯ ಬದುಕನ್ನು ಕಟ್ಟಿಕೊಂಡ ಕಾಲದಲ್ಲಿ ಈ ಶೇಂದಿ ನಿಷೇಧಕ್ಕೊಳಪಟ್ಟಿರುವುದು ದುರಾದೃಷ್ಟ. ಕೃಷಿಯ ಒಂದು ಭಾಗವಾಗಿರುವ ಶೇಂದಿಗೆ ಮಹತ್ವ ಬರಬೇಕು. ಸಿಎಚ್ ಪೌಡರ್ ಬಳಸಿ ಶೇಂದಿ ಮಾರಾಟವನ್ನು ಕೂಡಾ ನಿಲ್ಲಿಸಬೇಕು. ಪ್ರಧಾನ ಮಂತ್ರಿಗಳು ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದ್ದರೆ, ರಾಜ್ಯ ಸರಕಾರವು ಶೇಂದಿ ವಿಚಾರದಲ್ಲಿ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಕಳ ಬಿಲ್ಲವ ಸೇವಾ ಸಮಾಜ ಸಂಘದ ವತಿಯಿಂದ ಸ್ವಾಮೀಜಿಯವರನ್ನು ಅಭಿನಂದಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್.ರಾಜು, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಪುರಸಭೆ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಚಂದ್ರಹಾಸ ಸುವರ್ಣ, ರಮೇಶ್ ಪೆರ್ಲ, ಜಿತೇಂದ್ರ ಸುವರ್ಣ, ಬಿಪಿನ್ಚಂದ್ರಪಾಲ್ ನಕ್ರೆ, ವಸಂತ ಎಂ, ಸಂದೇಶ್, ಅಕ್ಷಯ, ಶ್ರೀಕಾಂತ್ ಮತ್ತು ಸಂಪತ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp