ಮುಂಬೈ: ಮುಂಬೈ ಸಮೀಪದ ಥಾಣೆಯ ಕೆಜಿ ಜೋಶಿ ಕಾಲೇಜ್ ಆಫ್ ಆರ್ಟ್ಸ್ ಮತ್ತು ಎನ್‌ಜಿ ಬೇಡಕರ್ ಕಾಲೇಜ್ ಆಫ್ ಕಾಮರ್ಸ್ (ಸ್ವಾಯತ್ತ)ದಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ತರಬೇತಿ ವೇಳೆ ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ಕೋಲಿನಿಂದ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮುಂಬೈನಲ್ಲಿ ಸುರಿಯುತ್ತಿರುವ ಮಳೆಯ ನಡುವೆ, ಎಂಟು ಯುವಕರನ್ನು ಕೆಸರು ನೀರಿನಲ್ಲಿ ಪುಶ್-ಅಪ್ ಮಾಡುವಂತೆ ಒತ್ತಾಯಿಸಲಾಗುತ್ತದೆ. ಆ ಹುಡುಗರ ಮುಖವನ್ನು ನೀರಲ್ಲಿ ಮುಳುಗಿಸಿ ಆಮೇಲೆ ಯುವಕನೊಬ್ಬ ದೊಡ್ಡ ಕೋಲಿನಿಂದ ಅವರ ಬೆನ್ನಿಗೆ ಬಾರಿಸುತ್ತಿರುವುದು ವಿಡಿಯೊದಲ್ಲಿದೆ.
ಕೋಲು ಹಿಡಿದು ಬಾರಿಸುತ್ತಿರುವವ ಹಿರಿಯ ಎನ್‌ಸಿಸಿ ಕೆಡೆಟ್. ಕಠಿಣ ಕಸರತ್ತನ್ನು ಪೂರ್ಣಗೊಳಿಸಲು ವಿಫಲರಾದ ಎನ್‌ಸಿಸಿ ಕೆಡೆಟ್‌ಗಳಿಗೆ ಈ ರೀತಿ ಶಿಕ್ಷೆ ನೀಡಲಾಗಿದ್ದು, ಇದನ್ನು ಕಾಲೇಜಿನ ವಿದ್ಯಾರ್ಥಿಯೊಬ್ಬ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದಾನೆ.
ಇಂತಹ ವರ್ತನೆಯನ್ನು ನಾವು ಸಹಿಸುವುದಿಲ್ಲ ಹಿರಿಯ ವಿದ್ಯಾರ್ಥಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್ ತಿಳಿಸಿದ್ದಾರೆ.
ಎನ್‌ಸಿಸಿ ಇಲ್ಲಿ ಸಾಕಷ್ಟು ಉತ್ತಮ ಕೆಲಸಗಳಲ್ಲಿ ತೊಡಗಿದೆ. ಸುಮಾರು 40 ವರ್ಷಗಳಿಂದ ಇಲ್ಲಿ ಎನ್‌ಸಿಸಿ ತರಬೇತಿ ನಡೆಯುತ್ತಿದೆ. ಶಿಕ್ಷಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮಾಡಿದ್ದನ್ನು ಮಾನಸಿಕ ಅಸ್ವಸ್ಥರು ಮಾತ್ರ ಮಾಡಬಲ್ಲರು ಎಂಬುದು ಈ ಕೃತ್ಯದಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.