ನವದೆಹಲಿ: ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಇಹ್ತೆಶಾಮ್ ಹಾಶ್ಮಿ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಲವು ಮಾನವ ಹಕ್ಕುಗಳ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಹಾಶ್ಮಿ ಅವರು ಸಂಘಪರಿವಾರಕ್ಕೆ ಸಿಂಹಸ್ವಪ್ನವಾಗಿದ್ದರು. ತ್ರಿಪುರಾದಲ್ಲಿ 2021ರಲ್ಲಿ ನಡೆದಿದ್ದ ಸರ್ಕಾರಿ ಪ್ರಾಯೋಜಿತ ಕೋಮುಗಲಭೆಯ ಬಗ್ಗೆ ಸತ್ಯಶೋಧನಾ ವರದಿ ತಯಾರಿಸಿ ಬಿಡುಗಡೆ ಮಾಡಿದ್ದರು. ಈ ವರದಿ ಬಿಡುಗಡೆ ಮಾಡಿದ್ದಕ್ಕಾಗಿ ಹಾಶ್ಮಿ ವಿರುದ್ಧ ತ್ರಿಪುರಾ ಸರ್ಕಾರ ಯುಎಪಿಎ ಪ್ರಕರಣ ದಾಖಲಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ಯಾವುದೇ ಕಾರಣಕ್ಕೂ ಹಾಶ್ಮಿ ಅವರನ್ನು ಬಂಧಿಸಬಾರದು ಮತ್ತು ಅವರು ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ಸೂಚಿಸಿತ್ತು.
ಇಂಟರ್ನೆಟ್ ಸ್ಥಗಿತಗೊಳಿಸುವುದನ್ನು “ಅಸಾಂವಿಧಾನಿಕ, ಕಾನೂನುಬಾಹಿರ ” ಎಂದು ಘೋಷಿಸುವಂತೆ ಕೋರಿ ಅವರು ಸುಪ್ರೀಂ ಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಭಾರತದಲ್ಲಿ, ವಿಶೇಷವಾಗಿ ಸಿಎಎ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅನಿಯಂತ್ರಿತ ಇಂಟರ್ನೆಟ್ ಸ್ಥಗಿತವನ್ನು ನಿಲ್ಲಿಸಲು ಅರ್ಜಿಯಲ್ಲಿ ಕೋರಲಾಗಿತ್ತು.
ಹಾಶ್ಮಿ ಅವರ ನಿಧನಕ್ಕೆ ಹಿರಿಯ ವಕೀಲರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.