ಮಂಗಳೂರು: ಬಂಟ್ವಾಳ ಬಿಜೆಪಿ ವತಿಯಿಂದ ನಡೆದ ಕಾರ್ಯಕ್ರಮ ಒಂದರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ‘ಅನಗತ್ಯವಾಗಿ ಬಾಲಬಿಚ್ಚಿದರೆ ಮಂಗಳೂರಿಗೂ ಬುಲ್ಡೋಝರ್ ಮಾಡೆಲ್ ಬರುತ್ತೆ’ ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು, ಇದನ್ನು ಎಸ್ ಡಿಪಿಐ ದ.ಕ ಜಿಲ್ಲಾ ಸಮಿತಿ ಕಟುವಾಗಿ ಖಂಡಿಸುತ್ತಿದೆ ಎಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಗೂ ರೈತ ಮುಖಂಡರೂ ಆದ ವಿಕ್ಟರ್ ಮಾರ್ಟೀಸ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಉದ್ದೇಶದಿಂದ ಇಂತಹ ಅತಿರೇಕದ ಹೇಳಿಕೆಗಳು ಪರಸ್ಪರ ಗಲಭೆ ನಡೆಸುವ ಸಂಘಪರಿವಾರದ ಯೋಜನೆಯ ಭಾಗವಾಗಿದೆ. ಬುಲ್ಡೋಝರ್ ಮಾಡೆಲನ್ನು ಪಿಎಸ್ಐ, 40% ಕಮಿಷನ್, ಬಿಡಿಎ,ರಫೇಲ್ ಹಗರಣ, ಅಧಿಕಾರಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡಿ ಶಾಸಕರನ್ನು ಖರೀದಿಸಿದ ಬಿಜೆಪಿ ನಾಯಕರ ಮನೆಗಳಿಗೆ ಕಳುಹಿಸಿ ಅಕ್ರಮ, ಭ್ರಷ್ಟಾಚಾರದ ಹಣದಿಂದ ಕಟ್ಟಿರುವ ಮನೆಗಳಿಗೆ ಬೇನಾಮಿ ಆಸ್ತಿಗಳಿಗೆ ಬುಲ್ಡೋಝರ್ ಮಾಡೆಲ್ ಬಳಕೆಯಾಗಲಿ ಎಂದು ಅವರು ಒತ್ತಾಯಿಸಿದ್ದಾರೆ
ಮೈಕ್ ಸಿಕ್ಕಿದ ಕೂಡಲೇ ನಾಲಗೆ ಹರಿಯ ಬಿಡುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಳೆದ ಇಪ್ಪತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಬಹಳಷ್ಟು ಅಕ್ರಮ ಆಸ್ತಿ ಸಂಪಾದಿಸಿದ ಬಗ್ಗೆ ಸಾರ್ವಜನಿಕವಾಗಿ ಸಂಶಯವಿದೆ. ಈ ಬಗ್ಗೆ ತನಿಖೆ ನಡೆಸಬೇಕು. ರಾಜ್ಯದಲ್ಲಿ ಬಿಜೆಪಿ ನಾಯಕರು ಕೂಡಿಟ್ಟ ಅಕ್ರಮ ಆಸ್ತಿಗಳ ಮೇಲೆ ನಿಮಗೆ ತಾಕತ್ತಿದ್ದರೆ ಬುಲ್ಡೋಜರ್ಸ್ ಪ್ರಯೋಗ ನಡೆಸಿ ಅದು ಬಿಟ್ಟು ಕುಖ್ಯಾತಿ ಆಡಳಿತಕ್ಕೆ ಹೆಸರುವಾಸಿಯಾದ ಯೋಗಿಯ ಯು ಪಿ ಮಾಡಲನ್ನ ಇಲ್ಲಿ ತರುತ್ತೇವೆ ಎಂದರೆ ಅದು ನಿಮ್ಮ ಹಗಲು ಕನಸು. ಈ ಜಿಲ್ಲೆ ಪ್ರಜ್ಞಾವಂತರ ಮತ್ತು ಬುದ್ದಿವಂತರ ಜಿಲ್ಲೆಯಾಗಿದೆ ಎಂಬುದು ಬಿಜೆಪಿ ರಾಷ್ಟ್ರೀಯ ಮುಖಂಡರು ಅರಿತು ಕೊಂಡು ಮಾತನಾಡುವುದು ಉತ್ತಮ. ದೇಶದಲ್ಲಿ ಕಾನೂನು, ಕೋರ್ಟ್, ಕಚೇರಿಗಳು ಯಾಕಾಗಿ ಎಂದು ವಿಕ್ಟರ್ ಮಾರ್ಟೀಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯವು ಓರ್ವ ಆರೋಪಿಯನ್ನು ಅಪರಾಧಿ ಎಂದು ತೀರ್ಪು ನೀಡುವ ತನಕ ಆತನ ವಿರುದ್ಧ ಸರ್ಕಾರ ಅಥವಾ ಯಾರೇ ಆದರೂ ಯಾವುದೇ ಕ್ರಮ ಕೈಗೊಳ್ಳುವುದು ಸಂವಿಧಾನ ಬಾಹಿರವಾಗಿದೆ. ಒಂದು ವೇಳೆ ನ್ಯಾಯಾಲಯದ ತೀರ್ಪಿನ ಮೊದಲೇ ಕಾನೂನು ವಿರೋಧಿಯಾಗಿ ಬುಲ್ಡೋಝರ್ ಮಾಡೆಲ್ ಬಂದಲ್ಲಿ ಸಂವಿಧಾನ ಬದ್ದವಾಗಿಯೇ ಆ ಬುಲ್ಡೋಝರ್ ಭ್ರಷ್ಟ, ಮತ್ತು ಕೋಮು ಪೀಡಿತ ಬಿಜೆಪಿ ನಾಯಕರ ಮನೆಗಳಿಗೆ ಕಳುಹಿಸಲು ಜಿಲ್ಲೆಯ ಜನತೆ ಸನ್ನದ್ದರಾಗಿದ್ದಾರೆ ಎಂದು ವಿಕ್ಟರ್ ಮಾರ್ಟೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.