ಚತ್ತೀಸಗಢ: ರಾಯಗಢ ಜಿಲ್ಲೆಯ ಗುಧಯ್ರಿ ಗ್ರಾಮದ ಸಾರಂಗಗಢ ಅರಣ್ಯ ಪ್ರದೇಶದಲ್ಲಿ ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ 21 ವರ್ಷದ ಯುವಕನನ್ನು ಕಾಡಾನೆ ಕೊಂದು ಹಾಕಿದ ಘಟನೆ ನಡೆದಿದೆ .
ಮೃತ ಯುವಕ ಮನೋಹರ್ ಪಟೇಲ್ ಮೂವರು ಗೆಳೆಯರ ಜೊತೆ ಸೇರಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿ ಆನೆಯ ತುಂಬಾ ಸಮೀಪಕ್ಕೆ ಹೋಗಿದ್ದರು ಎಂದು ರಾಯ್ಗಢ ಅರಣ್ಯ ಇಲಾಖೆ ವಿಭಾಗದ ಡಿಎಫ್ಓ ಪ್ರಣಯ್ ಮಿಶ್ರಾ ಹೇಳಿದ್ದಾರೆ.
ಯುವಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಂತೆಯೇ ಆಕ್ರೋಶಗೊಂಡ ಆನೆ ಕೂಡಲೇ ಈ ನಾಲ್ವರ ಮೇಲೆ ದಾಳಿ ಮಾಡಿದೆ. ಮೂವರು ಆನೆಯ ಆಕ್ರಮಣದಿಂದ ತಪ್ಪಿಸಿಕೊಂಡಿದ್ದು, ಪಟೇಲ್ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತ ಯುವಕನ ಕುಟುಂಬಕ್ಕೆ 25 ಸಾವಿರ ರೂಪಾಯಿ ಶೀಘ್ರ ಪರಿಹಾರ ನೀಡಲಾಗಿದೆ.
ಈ ಆನೆ ಪಟೇಲ್ಗೂ ಮೊದಲು ಮಲ್ದಾ ಗ್ರಾಮದಲ್ಲಿ ವೃದ್ಧ ಮಹಿಳೆಯನ್ನು ಶುಕ್ರವಾರ ಕೊಲೆ ಮಾಡಿತ್ತು. ಕೆಲ ದಿನಗಳ ಹಿಂದಷ್ಟೇ ಈ ಆನೆ ಸಾರಂಗಗಢ ಪ್ರದೇಶಕ್ಕೆ ಬಂದಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.